ತನ್ನ ವೃತ್ತಿಯ ವೈರಲ್ ವಿಡಿಯೊದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ತ್ಯಾಜ್ಯ ಸಂಗ್ರಾಹಕ
ಜೈಪುರ: ತನ್ನ ವೃತ್ತಿಯ ವೈರಲ್ ವಿಡಿಯೊದಿಂದ ಮನನೊಂದು ಹಿರಿಯ ತ್ಯಾಜ್ಯ ಸಂಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ತನ್ನ ಕೈಗಾಡಿಯಲ್ಲಿ ಸಂಗ್ರಹಿಸುತ್ತಿದ್ದ ಆ ಹಿರಿಯ ತ್ಯಾಜ್ಯ ಸಂಗ್ರಾಹಕ, ತನ್ನ ಜೀವನೋಪಾಯಕ್ಕಾಗಿ ಆ ತ್ಯಾಜ್ಯಗಳನ್ನು ಮಾರಾಟ ಮಾಡಿಕೊಂಡಿದ್ದರು ಎನ್ನಲಾಗಿದೆ.
ಲೌಹಾತ್ ಗ್ರಾಮದ ಕೆಲವು ಯುವಕರು ಆತನ ವೃತ್ತಿಯನ್ನು ಅಣಕವಾಡಿ, ವಿಡಿಯೊ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಆ ಹಿರಿಯ ವ್ಯಕ್ತಿಯನ್ನು ಅನೇಕರು ಗುರುತಿಸಲು ಪ್ರಾರಂಭಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, "ತ್ಯಾಜ್ಯ ಸಂಗ್ರಾಹಕನ ಮೃತದೇಹ ಹೆದ್ದಾರಿ ಬಳಿಯ ಮರವೊಂದರಿಂದ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.