ಆಗ್ರಾ | ವಾಕಿಂಗ್ ತೆರಳಿದ್ದ ಮಹಿಳೆ ಮೇಲೆ ದಾಳಿ ಮಾಡಿ ಎಳೆದೊಯ್ದ ಬೀದಿನಾಯಿಗಳು: ವೀಡಿಯೊ ವೈರಲ್
ಆಗ್ರಾ: ಉತ್ತರಪ್ರದೇಶದ ಆಗ್ರಾದ ಈದ್ಗಾ ಪ್ರದೇಶದ ಕಟ್ಘರ್ ಕಾಲೋನಿಯಲ್ಲಿ ವಾಕಿಂಗ್ ಗೆ ತೆರಳಿದ್ದ ಮಹಿಳೆಯೋರ್ವರ ಮೇಲೆ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಿರಿದಾದ ಓಣಿಯಲ್ಲಿ ಸುಮಾರು 7-8 ಬೀದಿ ನಾಯಿಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿ ಮಹಿಳೆಯನ್ನು ಎಳೆದೊಯ್ದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಯಿಗಳು ತನ್ನ ಮೇಲೆ ದಾಳಿ ಮಾಡಿದಾಗ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಾ ಜೀವನ್ಮರಣ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ.
ಬೀದಿ ನಾಯಿಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿದ್ದು, ಈ ವೇಳೆ ಮಹಿಳೆ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಆದರೆ ಯಾರೂ ಸಕಾಲದಲ್ಲಿ ರಕ್ಷಣೆಗೆ ಬಂದಿಲ್ಲ. ಈ ವೇಳೆ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ನಾಯಿಗಳ ಗುಂಪು ಮಹಿಳೆಯನ್ನು ಎಳೆದೊಯ್ದು ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸಿದೆ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಬೀದಿ ನಾಯಿಗಳ ಸಮಸ್ಯೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.