ಉತ್ತರಪ್ರದೇಶ | ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ವೃದ್ದೆ ಮೃತ್ಯು: ವೈದ್ಯರು ರೀಲ್ಸ್ ವೀಕ್ಷಿಸುತ್ತಿದ್ದರು ಎಂದು ಆರೋಪಿಸಿದ ಕುಟುಂಬ

Update: 2025-01-29 20:06 IST
ಉತ್ತರಪ್ರದೇಶ | ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ವೃದ್ದೆ ಮೃತ್ಯು: ವೈದ್ಯರು ರೀಲ್ಸ್ ವೀಕ್ಷಿಸುತ್ತಿದ್ದರು ಎಂದು ಆರೋಪಿಸಿದ ಕುಟುಂಬ

Photo Credit: indiatoday.in

  • whatsapp icon

ಮೈನ್ ಪುರಿ: ಹೃದಯಘಾತಕ್ಕೊಳಗಾಗಿದ್ದ 60 ವರ್ಷದ ಮಹಿಳೆಗೆ ಸುಮಾರು 15 ನಿಮಿಷಗಳ ಕಾಲ ಮೈನ್ ಪುರಿ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡದಿದ್ದರಿಂದ, ಆಕೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಪ್ರವೇಶ್ ಕುಮಾರಿ ಎಂದು ಗುರುತಿಸಲಾಗಿದೆ. ಕರ್ತವ್ಯ ನಿರತ ವೈದ್ಯ ಡಾ.ಆದರ್ಶ್ ಸೆಂಗರ್ ಗೆ ನಾವು ಪದೇ ಪದೇ ಮನವಿ ಮಾಡಿದರೂ, ಅದನ್ನು ನಿರ್ಲಕ್ಷಿಸಿ ತಮ್ಮ ಮೊಬೈಲ್ ನಲ್ಲಿ ವಿಡಿಯೊಗಳನ್ನು ನೋಡುತ್ತಾ ಸಮಯ ಕಳೆದರು ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಪ್ರವೇಶ್ ಕುಮಾರಿ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ಕರೆ ತರಲಾಗಿತ್ತು. ಅವರನ್ನು ವೈಯಕ್ತಿಕವಾಗಿ ತಪಾಸಣೆ ನಡೆಸುವ ಬದಲು, ಪರಿಸ್ಥಿತಿಯನ್ನು ನಿಭಾಯಿಸಲು ಶುಶ್ರೂ್ಷಕಿಯೊಬ್ಬರಿಗೆ ಡಾ. ಆದರ್ಶ್ ಸೆಂಗರ್ ಸೂಚನೆ ನೀಡಿದರು ಎಂದು ಆರೋಪಿಸಲಾಗಿದೆ. ಮೃತ ಮಹಿಳೆಯ ಕುಟುಂಬದ ಸದಸ್ಯರು ಪದೇ ಪದೇ ಮನವಿ ಮಾಡಿದರೂ, ಡಾ. ಆದರ್ಶ್ ತಮ್ಮ ಮೊಬೈಲ್ ನಲ್ಲೇ ಮುಳುಗಿದ್ದರು ಎಂದು ದೂರಲಾಗಿದೆ.

ನಂತರ, ಪ್ರವೇಶ್ ಕುಮಾರಿಯ ಆರೋಗ್ಯ ಸ್ಥಿತಿ ವಿಷಮಿಸಿದ್ದು, ಆಕೆಯ ಪುತ್ರ ಹಾಗೂ ಕುಟುಂಬದ ಸದಸ್ಯರು ತಕ್ಷಣವೇ ಮಧ್ಯುಪ್ರವೇಶಿಸುವಂತೆ ವೈದ್ಯ ಡಾ. ಆದರ್ಶ್ ರನ್ನು ಆಗ್ರಹಿಸಿದ್ದಾರೆ. ಆದರೆ, ಆಸ್ಪತ್ರೆಯ ಸ್ಟ್ರೆಚರ್ ಮೇಲೆಯೇ ರಕ್ತವನ್ನು ಕೆಮ್ಮಿ, ನಂತರ ಅವರು ಮೃತಪಟ್ಟಾಗ, ಅವರ ಪುತ್ರ ಈ ನಿರ್ಲಕ್ಷ್ಯವನ್ನು ಪ್ರತಿಭಟಿಸಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಡಾ. ಆದರ್ಶ್ ಸೆಂಗರ್, ಆತನಿಗೆ ಕಪಾಳಮೋಕ್ಷ ಮಾಡಿದ್ದು, ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ವೈದ್ಯರು ತಮ್ಮ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ರೀಲ್ಸ್ ನೋಡುವುದರಲ್ಲಿ ಮಗ್ನರಾಗಿದ್ದರೆ, ಶುಶ್ರೂಷಕಿಯೊಬ್ಬರು ರೋಗಿಯನ್ನು ಉಪಚರಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೊ ತುಣುಕಿನಲ್ಲಿ ವೈದ್ಯರು ಮೃತ ಮಹಿಳೆಯ ಪುತ್ರನಿಗೆ ಕಪಾಳ ಮೋಕ್ಷ ಮಾಡುತ್ತಿರುವುದೂ ಸೆರೆಯಾಗಿದೆ.

ಈ ಘಟನೆಯ ನಂತರ, ಆಸ್ಪತ್ರೆಯ ಪ್ರಾಧಿಕಾರಗಳು ಘಟನೆಯ ಕುರಿತು ತನಿಖೆ ಕೈಗೊಂಡಿವೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮದನ್ ಲಾಲ್ ದೃಢಪಡಿಸಿದ್ದು, ಒಂದು ವೇಳೆ ನಿರ್ಲಕ್ಷ್ಯ ಪ್ರದರ್ಶಿಸಿರುವುದು ದೃಢಪಟ್ಟರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News