ಮೊದಲ ಎರಡು ಚುನಾವಣಾ ಹಂತಗಳಲ್ಲಿ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಬಹಿರಂಗಗೊಳಿಸಬೇಕು : ಮಾಜಿ ಮುಖ್ಯ ಚುನಾವಣಾ ಆಯುಕ್ತ ಕುರೈಶಿ ಆಗ್ರಹ

Update: 2024-05-06 16:33 GMT

 ಎಸ್.ವೈ.ಕುರೈಶಿ | PC : NDTV

ಹೊಸದಿಲ್ಲಿ : ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ ಮತದಾರರ ಒಟ್ಟು ಸಂಖ್ಯೆಯನ್ನು ಚುನಾವಣಾ ಆಯೋಗವು ಬಹಿರಂಗಗೊಳಿಸಲೇಬೇಕು ಎಂದು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಕುರೈಶಿ ಅವರು ಆಗ್ರಹಿಸಿದ್ದಾರೆ.

ಎ.19 ಮತ್ತು ಎ.26ರಂದು ನಡೆದಿದ್ದ ಮೊದಲ ಎರಡು ಹಂತಗಳ ಚುನಾವಣೆಯಲ್ಲಿ ಅಂತಿಮ ಮತದಾನದ ಶೇಕಡಾವಾರು ಪ್ರಮಾಣಗಳನ್ನು ಚುನಾವಣಾ ಆಯೋಗವು ಎ.30ರಂದು ಬಿಡುಗಡೆಗೊಳಿಸಿದೆ. ಆದರೆ ಪ್ರತಿ ಕ್ಷೇತ್ರದಲ್ಲಿ ತಮ್ಮ ಮತಗಳನ್ನು ಚಲಾಯಿಸಿದ ಮತದಾರರ ನೈಜ ಸಂಖ್ಯೆಯನ್ನು ಅದು ನಿರ್ದಿಷ್ಟವಾಗಿ ತಿಳಿಸಿಲ್ಲ.

ಈ ಮಾಹಿತಿಯನ್ನು ಮತದಾನದ 24 ಗಂಟೆಗಳ ಒಳಗೆ ಬಹಿರಂಗಗೊಳಿಸಬೇಕು ಎಂದು ಒತ್ತಿ ಹೇಳಿದ ಕುರೈಶಿ, 2014ರ ಸಾರ್ವತ್ರಿಕ ಚುನಾವಣೆಗೆ ಮೊದಲು ಇದು ರೂಢಿಯಲ್ಲಿತ್ತು ಎಂದು ಎತ್ತಿ ತೋರಿಸಿದರು. ಈ ಮಾಹಿತಿಯನ್ನು ಪ್ರಕಟಿಸಲು ಚುನಾವಣಾ ಆಯೋಗವು ವಿಫಲಗೊಂಡಿರುವುದನ್ನು ಯಾವುದೇ ಕಾರಣದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದರು.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಕುರೈಶಿ, ಚುನಾವಣಾ ಆಯೋಗವು ಮತದಾರರ ಸಂಖ್ಯೆಯನ್ನು ಬಹಿರಂಗಗೊಳಿಸದಿರುವುದು ಸ್ವೀಕಾರಾರ್ಹವಲ್ಲ. ಪಾರದರ್ಶಕತೆಗಾಗಿ ಮತದಾರರ ಸಂಪೂರ್ಣ ಸಂಖ್ಯೆಯನ್ನು ಹೊಂದಿರುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಲಾಭೋದ್ದೇಶವಿಲ್ಲದ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ಸಂಸ್ಥಾಪಕ ಜಗದೀಪ ಛೋಕರ್ ಅವರೂ, ಮತದಾರರ ಒಟ್ಟು ಸಂಖ್ಯೆಯ ಕುರಿತು ಮಾಹಿತಿಯಿಲ್ಲದೆ ಮತದಾನದ ಶೇಕಡಾವಾರು ಪ್ರಮಾಣಗಳಿಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News