ಹರ್ಯಾಣ: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ

Update: 2024-05-09 08:44 GMT

ದುಷ್ಯಂತ್ ಚೌಟಾಲ (PTI)

ಚಂಡೀಗಢ: ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು ಹಿಂಪಡೆದಿರುವುದರಿಂದ ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಸೂಚಿಸಬೇಕು ಎಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಮಾಜಿ ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಪತ್ರ ಬರೆದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಬಿಜೆಪಿಯು ದುಷ್ಯಂತ್ ಚೌಟಾಲ ನೇತೃತ್ವದ ಜನನಾಯಕ್ ಜನತಾ ಪಕ್ಷದೊಂದಿಗಿನ ಮೈತ್ರಿಯನ್ನು ಕಡಿದುಕೊಂಡ ನಂತರ ಹೊಸ ಸರಕಾರ ರಚನೆಯಾಗಿತ್ತು. ಖಟ್ಟರ್ ರಾಜಿನಾಮೆ ಸಲ್ಲಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ನಂತರ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಜೆಜೆಪಿ ಪಕ್ಷವು ಬೆಂಬಲ ನೀಡಿಲ್ಲ.

ಬುಧವಾರ ರಾಜ್ಯಪಾಲರಿಗೆ ಪತ್ರ ಬರೆದಿರುವ ದುಷ್ಯಂತ್ ಚೌಟಾಲ, ಸರಕಾರ ರಚನೆಗೆ ಬೇರಾವುದೇ ಪಕ್ಷಕ್ಕೆ ಬೆಂಬಲಿಸಲು ಜೆಜೆಪಿ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.

90 ಮಂದಿ ಸದಸ್ಯ ಬಲದ ಹರ್ಯಾಣ ವಿಧಾನಸಭೆಯ ಹಾಲಿ ಸಂಖ್ಯಾಬಲವು 88ರಷ್ಟಿದೆ. ಈ ಪೈಕಿ ಬಿಜೆಪಿಯ 40 ಶಾಸಕರು, ಕಾಂಗ್ರೆಸ್‌ನ 30 ಶಾಸಕರು ಹಾಗೂ ಜೆಜೆಪಿಯ 10 ಶಾಸಕರ ಬಲ ಸದನದಲ್ಲಿದೆ. ಇದರೊಂದಿಗೆ ಭಾರತೀಯ ಲೋಕ ದಳ ಹಾಗೂ ಹರ್ಯಾಣ ಲೋಕಹಿತ ಪಕ್ಷದ ತಲಾ ಓರ್ವ ಶಾಸಕರಿದ್ದಾರೆ. ಇದಲ್ಲದೆ ಆರು ಮಂದಿ ಪಕ್ಷೇತರ ಶಾಸಕರಿದ್ದಾರೆ.

ಸದ್ಯ ಬಿಜೆಪಿ ಸರಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲವಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News