ಅದಾನಿ, ಎಸ್ಸಾರ್ ವಿದ್ಯುತ್ ಕಂಪೆನಿಗಳ ಕಲ್ಲಿದ್ದಲು ಆಮದಿಗೆ ಉತ್ಪ್ರೇಕ್ಷಿತ ಲೆಕ್ಕ ; ಸಿಬಿಐ ತನಿಖೆಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ: ತಾವು ಕಲ್ಲಿದ್ದಲನ್ನು ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಬಿಂಬಿಸಲು ಅದಾನಿ ಗುಂಪು ಮತ್ತು ಎಸ್ಸಾರ್ ಗುಂಪಿನ ಕಂಪೆನಿಗಳು ಸೇರಿದಂತೆ ವಿದ್ಯುತ್ ಕಂಪೆನಿಗಳು ಉತ್ಪ್ರೇಕ್ಷಿತ ಲೆಕ್ಕಗಳನ್ನು ಕೊಡುತ್ತಿವೆ ಎಂಬ ಆರೋಪಗಳ ಬಗ್ಗೆ ಕ್ಷಿಪ್ರವಾಗಿ ತನಿಖೆ ನಡೆಸುವಂತೆ ದಿಲ್ಲಿ ಹೈಕೋರ್ಟ್ ಮಂಗಳವಾರ ಸಿಬಿಐ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ.
ಸರಕಾರೇತರ ಸಂಘಟನೆ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಶ ಮಂದರ್ ಸಲ್ಲಿಸಿರುವ ಎರಡು ಸಾರ್ವಜಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮಿನಿ ಪುಷ್ಕರ್ಣ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ನಿರ್ದೇಶನ ನೀಡಿದರು.
‘‘ಅದಾನಿ ಗುಂಪು ಮತ್ತು ಎಸ್ಸಾರ್ ಗುಂಪಿಗೆ ಸೇರಿದ ವಿವಿಧ ಕಂಪೆನಿಗಳು ವಿದೇಶಗಳಿಂದ ಕಡಿಮೆ ಬೆಲೆಗೆ ಕಲ್ಲಿದ್ದಲನ್ನು ಆಮದು ಮಾಡಿದರೂ, ಹೆಚ್ಚು ಬೆಲೆಗೆ ಆಮದು ಮಾಡಿದಂತೆ ಲೆಕ್ಕಗಳನ್ನು ತೋರಿಸುತ್ತಿವೆ. ಹೀಗೆ ಹೆಚ್ಚುವರಿಯಾಗಿ ಸಂಗ್ರಹಿಸಿದ ಹಣವನ್ನು ಬಿಳಿ ಮಾಡಲು ಅವುಗಳು ಅದನ್ನು ವಿದೇಶಗಳಿಗೆ ಕಳುಹಿಸುತ್ತಿವೆ’’ ಎಂದು 2017ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಆರೋಪಿಸಿವೆ. ಈ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡವೊಂದು ತನಿಖೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಈ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯವು 2014 ಮೇ 15 ಮತ್ತು 2016 ಮೇ 31ರಂದು ಹೊರಡಿಸಿರುವ ನೋಟಿಸ್ ಗಳನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.
ಅದಾನಿ ಗುಂಪಿಗೆ ಸೇರಿದ ಕಂಪೆನಿಗಳು ಇಂಡೋನೇಶ್ಯದಿಂದ ಮಾಡಲಾಗಿರುವ ಕಲ್ಲಿದ್ದಲು ಆಮದಿಗೆ ಅಧಿಕ ಬೆಲೆಯನ್ನು ತೋರಿಸಿ ಹೆಚ್ಚುವರಿ ಹಣವನ್ನು ವಿದೇಶಕ್ಕೆ ಕಳುಹಿಸಿವೆ ಮತ್ತು ಅದಕ್ಕಾಗಿ ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುತ್ತಿವೆ ಎಂದು 2016ರಲ್ಲಿ ಹೊರಡಿಸಿದ ನೋಟಿಸಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಆರೋಪಿಸಿತ್ತು.