ಅತಿಯಾದ ಗ್ರಾಮೀಣ ಗಮನ, ಒಳಜಗಳ ಛತ್ತೀಸ್ ಗಢದಲ್ಲಿ ಸೋಲಿಗೆ ಕಾರಣ: ಕಾಂಗ್ರೆಸ್ ಆತ್ಮವಿಮರ್ಶೆ
ಹೊಸದಿಲ್ಲಿ: ಭೂಪೇಶ್ ಬಘೇಲ್ ಸರ್ಕಾರ ಗ್ರಾಮೀಣ ವಿಷಯಗಳ ಬಗ್ಗೆ ಅತಿಯಾಗಿ ಗಮನ ಹರಿಸಿದ್ದು, ಬಿಜೆಪಿಯ ಕೋಮು ಧ್ರುವೀಕರಣ, ಪಕ್ಷದಲ್ಲಿ ಸುಧೀರ್ಘ ಕಾಲದಿಂದ ಇದ್ದ ಒಳಜಗಳ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಎಂದು ಪಕ್ಷದ ನಾಯಕರು ನಡೆಸಿದ ಆತ್ಮಾವಲೋಕನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ಗಾಂಧಿ, ಹಿರಿಯ ಮುಖಂಡರಾದ ಕಮಲ್ನಾಥ್, ದಿಗ್ವಿಜಯ ಸಿಂಗ್, ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗವಹಿಸಿದ್ದು, ಮಧ್ಯಪ್ರದೇಶದಲ್ಲಿ ಚುನಾವಣೆ ಸೋಲಿಗೆ ಸಂಬಂಧಿಸಿದಂತೆ ಇವಿಎಂ ಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಕಾಂಗ್ರೆಸ್ ಪಕ್ಷ ಒಬ್ಬ ವ್ಯಕ್ತಿಯ ಮೇಲೆ (ಕಮಲನಾಥ್) ಗಮನ ಕೇಂದ್ರೀಕರಿಸಿದ್ದು, ಬಿಜೆಪಿಯಂತೆ ಸಂಘಟಿತವಾಗಿ ಮುಖಂಡರು ಹಾಗೂ ಸಮುದಾಯಗಳನ್ನು ಬಿಂಬಿಸಲು ವಿಫಲವಾದದ್ದೇ ಸೋಲಿಗೆ ಕಾರಣ ಎಂದು ಕೆಲ ಮುಖಂಡರು ಅಭಿಪ್ರಾಯಪಟ್ಟರು. ಇತರ ಹಿಂದುಳಿದ ವರ್ಗದವರ ಪ್ರಾಬಲ್ಯ ಇರುವ ಕ್ಷೇತ್ರಗಳ ಪೈಕಿ ಶೇಕಡ 80ರಷ್ಟು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ನಗರ ಪ್ರದೇಶಗಳು ಬಿಜೆಪಿ ಪರವಾಗಿ ಮತ ಚಲಾಯಿಸಿವೆ ಎಂದು ಕೆಲ ಮುಖಂಡರು ವಿಶ್ಲೇಷಿಸಿದರು. 2018ರ ಕಾಂಗ್ರೆಸ್ ಮತಗಳಿಕೆಯಲ್ಲಿ ಎಸ್ಸಿ/ಎಸ್ಟಿ ಹಾಗೂ ಅಲ್ಪಸಂಖ್ಯಾತರು ಸಿಂಹಪಾಲು ಹೊಂದಿದ್ದರು ಎಂದೂ ವಾದಿಸಲಾಯಿತು.
ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಪಕ್ಷ 2018ರಲ್ಲಿ ಗಳಿಸಿದ್ದ ಮತ ಪ್ರಮಾಣವನ್ನು ಅಂದರೆ ಶೇಕಡ 42ರಷ್ಟು ಪಾಲನ್ನು ಉಳಿಸಿಕೊಂಡಿದ್ದು, ಬಿಜೆಪಿ ಮತಗಳಿಕೆ ಶೇಕಡ 13ರಷ್ಟು ಹೆಚ್ಚಿದೆ ಎಂದು ಎಐಸಿಸಿ ಮುಖಂಡರು ಸ್ಪಷ್ಟಪಡಿಸಿದರು. ಜೋಗಿ ಕಾಂಗ್ರೆಸ್ನಂಥ ಸಣ್ಣ ಪಕ್ಷಗಳ ಕಾರಣದಿಂದ ಬಿಜೆಪಿಯ ಮತಗಳಿಕೆ ಹೆಚ್ಚಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಜಾತಿ ಗಣತಿ ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ 18 ನಗರ ಕ್ಷೇತ್ರಗಳ ಪೈಕಿ 2ನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಸೋತ ವಿಚಾರ ಪ್ರಮುಖವಾಗಿ ಚರ್ಚೆಯಾಯಿತು. ಮುಖ್ಯಮಂತ್ರಿ ಬಘೇಲ್ ಅವರ ಪ್ರಬಲ ಕೋಟೆ ಎನಿಸಿದ ರಾಯಪುರ ಪ್ರದೇಶದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಪಕ್ಷದ ಪಾಲಿಗೆ ದುಬಾರಿಯಾಯಿತು ಎನ್ನಲಾಗಿದೆ.