ಪ್ರಧಾನಿಯ ದ್ವೇಷ ಭಾಷಣವನ್ನು ಟೀಕಿಸಿ ಬಿಜೆಪಿಯಿಂದ ಉಚ್ಚಾಟನೆಗೊಳಗಾದ ಅಲ್ಪಸಂಖ್ಯಾತ ಮೋರ್ಚಾ ನಾಯಕನ ಬಂಧನ

Update: 2024-04-27 11:40 GMT

ನರೇಂದ್ರ ಮೋದಿ , ಉಸ್ಮಾನ್‌ ಘನಿ | PC : X

ಜೈಪುರ್: ಶಾಂತಿ ಭಂಗ ಪ್ರಕರಣವೊಂದರಲ್ಲಿ ರಾಜಸ್ಥಾನ ಪೊಲೀಸರು ಇಂದು ರಾಜ್ಯದ ಉಚ್ಚಾಟಿತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕ ಉಸ್ಮಾನ್‌ ಘನಿ ಅವರನ್ನು ಬಂಧಿಸಿದ್ದಾರೆ. ಅವರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಇತ್ತೀಚೆಗೆ ಪ್ರಧಾನಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಕಾನೇರ್‌ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್‌ ಘನಿ ಅವರನ್ನು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂಬ ಕಾರಣ ನೀಡಿ ಬುಧವಾರ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ರಾಜಸ್ಥಾನದ ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಅವರು ಹೊಸದಿಲ್ಲಿಯಲ್ಲಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಹೇಳಿದ್ದರಲ್ಲದೆ ಮುಸ್ಲಿಮರ ಕುರಿತಂತೆ ಪ್ರಧಾನಿ ರಾಜ್ಯದ ತಮ್ಮ ಚುನಾವಣಾ ರ್ಯಾಲಿಗಳಲ್ಲಿ ನೀಡಿದ ಹೇಳಿಕೆಗಳನ್ನು ಖಂಡಿಸಿದ್ದರು.

ಓರ್ವ ಮುಸ್ಲಿಮನಾಗಿ ತನಗೆ ಪ್ರಧಾನಿ ಹೇಳಿರುವುದು ನಿರಾಸೆ ಮೂಡಿಸಿದೆ, ಬಿಜೆಪಿಗೆ ಮತ ನೀಡಿ ಎಂದು ಮುಸ್ಲಿಮರ ಬಳಿ ಮತಯಾಚನೆಗೆ ಹೋದಾಗ ಸಮುದಾಯದ ಜನರು ಪ್ರಧಾನಿಯ ಹೇಳಿಕೆಗಳನ್ನು ಉಲ್ಲೇಖಿಸಿ ತಮ್ಮಿಂದ ಉತ್ತರಗಳನ್ನು ಬಯಸುತ್ತಾರೆ ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News