ಪನ್ನುನ್ ಹತ್ಯೆಗೆ ವಿಫಲ ಸಂಚು : ಝೆಕ್ ಗಣರಾಜ್ಯದಲ್ಲಿ ಬಂಧಿತ ಭಾರತೀಯನ ಅರ್ಜಿ ತಿರಸ್ಕರಿಸಿದ ಸುಪೀಂ ಕೋರ್ಟ್
ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿ ಗರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ವಿಫಲ ಸಂಚು ರೂಪಿಸಿದ್ದ ಎಂಬ ಆರೋಪದಲ್ಲಿ ಅಮೆರಿಕದ ಮನವಿಯ ಮೇರೆಗೆ ಝೆಕ್ ಗಣರಾಜ್ಯದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾನ ಪರವಾಗಿ ಕುಟುಂಬ ಸದಸ್ಯರೋರ್ವರು ರಾಯಭಾರ ಕಚೇರಿ ಸಂಪರ್ಕಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ.
‘ಈ ವಿಷಯದಲ್ಲಿ ನಾವು ಮಾಡುವುದೇನೂ ಇಲ್ಲ. ವಿಯೆನ್ನಾ ಒಪ್ಪಂದದಡಿ ನೀವು ರಾಯಭಾರ ಕಚೇರಿಯನ್ನು ಸಂಪರ್ಕಿಸುವ ಹಕ್ಕು ಹೊಂದಿದ್ದೀರಿ ಮತ್ತು ನೀವೀಗಾಗಲೇ ಅದನ್ನು ಪಡೆದುಕೊಂಡಿದ್ದೀರಿ ’ ಎಂದು ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು ಹೇಳಿತು.
ವಿದೇಶಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮತ್ತು ಸಾರ್ವಭೌಮತೆ ಹಾಗೂ ಆ ದೇಶದ ಕಾನೂನನ್ನು ಈ ನ್ಯಾಯಾಲಯವು ಗೌರವಿಸಬೇಕು. ಹೀಗಾಗಿ ವಿಷಯದ ಅರ್ಹತೆಯನ್ನು ಅದು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ ಎಂದು ಪೀಠವು ಗುಪ್ತಾನ ಸಂಬಂಧಿಯ ಪರ ಹಿರಿಯ ವಕೀಲ ಸಿ.ಎ.ಸುಂದರಂ ಅವರಿಗೆ ತಿಳಿಸಿತು.
ಗುಪ್ತಾರನ್ನು ಏಕಾಂತ ಬಂಧನದಲ್ಲಿಡಲಾಗಿದೆ ಮತ್ತು ದೋಷಾರೋಪಣೆಯ ಬಳಿಕ ಅವರಿಗೆ ರಾಯಭಾರ ಕಚೇರಿಯ ಸಂಪರ್ಕಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ನಿವೇದಿಸಿಕೊಳ್ಳಲು ಸುಂದರಂ ಪ್ರಯತ್ನಿಸಿದಾಗ ಪೀಠವು, ‘ವಿದೇಶಿ ನ್ಯಾಯಾಲಯದ ಕುರಿತು ಏನನ್ನೂ ಹೇಳಲು ನಾವು ನಿಮಗೆ ಅವಕಾಶ ನೀಡುವುದಿಲ್ಲ ’ ಎಂದು ಸ್ಪಷ್ಟಪಡಿಸಿತು.
ಇದು ಸಂಪೂರ್ಣವಾಗಿ ಮಾನವ ಹಕ್ಕುಗಳ ಸಮಸ್ಯೆಯಾಗಿದೆ ಮತ್ತು ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ನೆರವನ್ನು ಕೋರಿದ್ದಾರೆ, ಆದರೆ ಅದು ಅವರಿಗೆ ಸಿಕ್ಕಿಲ್ಲ ಎಂದು ಸುಂದರಂ ಹೇಳಿದರು.
ಗುಪ್ತಾ ಮನವಿಯನ್ನು ಪರಿಶೀಲಿಸಲು ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಸುಂದರಂ ಕೋರಿದಾಗ, ಅದನ್ನು ಸರಕಾರವು ನಿರ್ಧರಿಸಬೇಕು. ತಾನು ಇಂತಹ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿತು.
2023, ಸೆ.17ರಂದು ಗುಪ್ತಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶವನ್ನು ಪಡೆದಿದ್ದರು ಮತ್ತು ಅವರು ದಿಲ್ಲಿ ಉಚ್ಚ ನ್ಯಾಯಾಲಯಕ್ಕೂ ಅರ್ಜಿಯನ್ನು ಸಲ್ಲಿಸಿದ್ದರು. ಅದು ಕೆಲವು ಆದೇಶಗಳನ್ನು ಹೊರಡಿಸಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಿಸಿತು.
ಕಳೆದ ವರ್ಷದ ಡಿ.15ರಂದು ಸರ್ವೋಚ್ಚ ನ್ಯಾಯಲಯವು ಗುಪ್ತಾ ಅವರ ಸಂಬಂಧಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು.
ಗುಪ್ತಾರನ್ನು ಜೂ.30ರಂದು ಝೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು. ಏಕಾಂತ ಬಂಧನದಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿರುವ ಅವರು, ಹಂದಿ ಮಾಂಸ ಮತ್ತು ದನದ ಮಾಂಸ ಸೇವಿಸಲು ತನಗೆ ಬಲವಂತಗೊಳಿಸಲಾಗುತ್ತಿದೆ. ತನಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶವನ್ನು,ಭಾರತದಲ್ಲಿರುವ ತನ್ನ ಕುಟುಂಬವನ್ನು ಸಂಪರ್ಕಿಸುವ ಹಕ್ಕನ್ನು ಮತ್ತು ಕಾನೂನು ಪ್ರಾತಿನಿಧ್ಯವನ್ನು ಪಡೆಯುವ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ ಎಂದೂ ಆಪಾದಿಸಿದ್ದಾರೆ.
ಕಳೆದ ವರ್ಷದ ನ.29ರಂದು ಫೆಡರಲ್ ಪ್ರಾಸಿಕ್ಯೂಟರ್ಗಳು ಗುಪ್ತಾ ಅವರ ವಿರುದ್ಧ ಅಮೆರಿಕದಲ್ಲಿ ಪನ್ನುನ್ ಹತ್ಯೆಯ ವಿಫಲ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪವನ್ನು ಹೇರಿದ್ದಾರೆ.
ನ್ಯೂಯಾರ್ಕ್ ನಿವಾಸಿ ಪನ್ನುನ್ ಹತ್ಯೆಗಾಗಿ ಬಾಡಿಗೆ ಹಂತಕನಿಗೆ ಒಂದು ಲಕ್ಷ ಡಾಲರ್ಗಳನ್ನು ನೀಡಲು ಗುಪ್ತಾ ಒಪ್ಪಿಕೊಂಡಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.