ಸರ್ಕಾರಿ ಉದ್ಯೋಗಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಹಾವಳಿ: ಯುವಕರಿಂದ ಬೆತ್ತಲೆ ಪ್ರತಿಭಟನೆ

Update: 2023-07-18 14:37 GMT

Photo: Shocking 'nude' protests held in Raipur, Chhattisgarh | Twitter

ರಾಯ್ಪುರ: ಛತ್ತೀಸ್‌ಗಢದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ನಕಲಿ ಜಾತಿ ಪ್ರಮಾಣಪತ್ರದ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಆಗ್ರಹಿಸಿ ಯುವಕರ ಗುಂಪೊಂಡು ನಗ್ನವಾಗಿ ಪ್ರತಿಭಟನೆ ನಡೆಸಿದೆ. ರಾಜ್ಯ ವಿಧಾನಸಭೆಯ ಅಧಿವೇಶನ ನಡೆಯುತ್ತಿರುವ ನಡುವೆ, ಈ ಪ್ರತಿಭಟನೆ ನಡೆಸಿದ್ದು, ನಕಲಿ ಜಾತಿ ಪ್ರಮಾಣ ಪತ್ರದ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಕರು ನಗ್ನರಾಗಿ ರಸ್ತೆಗಿಳಿದಿದ್ದಾರೆ.

ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಮೈಮೇಲೆ ಬಟ್ಟೆಯಿಲ್ಲದೆ ರಸ್ತೆಯಲ್ಲಿ ನಡೆದ ಯುವಕರು, ʼನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.

ಹಲವಾರು ಬಾರಿ ಈ ಬೇಡಿಕೆಯನ್ನು ಮುಂದಿಟ್ಟರೂ ಸಂಬಂಧಪಟ್ಟವರು ಗಮನ ಹರಿಸಿಲ್ಲ, ಹಾಗಾಗಿ, ಈ ಮಾರ್ಗವನ್ನು ಅನುಸರಿಸಬೇಕಾಯಿತು ಎಂದು ಪ್ರತಿಭಟನಾಕಾರರು ಹೇಳಿರುವುದಾಗಿ ವರದಿಯಾಗಿದೆ.

ತಮ್ಮ ಬೇಡಿಕೆಯನ್ನು ಬರೆದಿರುವ ಭಿತ್ತಿಪತ್ರಗಳನ್ನು ಹಿಡಿದಿರುವ ಯುವಕರು, ವಿಧಾನಸಭೆಗೆ ಆಗಮಿಸುತ್ತಿದ್ದ ವಿಐಪಿ ಕಾರುಗಳ ಬಳಿಗೆ ಓಡಿ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಮಾಡುತ್ತಿರುವ ಪ್ರಯತ್ನಗಳು ವಿಡಿಯೋಗಳಲ್ಲಿ ಸೆರೆಯಾಗಿದೆ.

ಛತ್ತೀಸ್‌ಗಢದಲ್ಲಿ ಸರ್ಕಾರಿ ನೌಕರಿ ಪಡೆಯಲು ನಕಲಿ ಜಾತಿ ಪ್ರಮಾಣ ಪತ್ರವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂಬ ಆರೋಪ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. 2021 ರಲ್ಲಿ, ನಕಲಿ ಪರಿಶಿಷ್ಟ ಪಂಗಡ (ST) ಜಾತಿ ಪ್ರಮಾಣಪತ್ರವನ್ನು ಬಳಸಿದ್ದಕ್ಕಾಗಿ PWD ಕಾರ್ಯನಿರ್ವಾಹಕ ಇಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ.

ಸರ್ಕಾರಿ ನೌಕರಿ ಪಡೆಯಲು ಅಭ್ಯರ್ಥಿಗಳು ಬಳಸುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಹೊಂದಿರುವವರು ಅರ್ಹತೆ ಇಲ್ಲದೇ ಉದ್ಯೋಗದ ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿದ್ದು, ಅಂತಹ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ರಾಜ್ಯ ಆಯೋಗ ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News