ರೈತರು ಎಂಎಸ್‌ಪಿ, ಯುವಜನತೆ ಉದ್ಯೋಗ ಕೇಳುತ್ತಿದ್ದಾರೆ; ಯಾರೂ ಆಲಿಸುತ್ತಿಲ್ಲ: ರಾಹುಲ್ ಗಾಂಧಿ

Update: 2024-04-11 15:54 GMT

ರಾಹುಲ್ ಗಾಂಧಿ | PC : PTI 

ಜೈಪುರ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡುವಂತೆ ರೈತರು, ಉದ್ಯೋಗ ನೀಡುವಂತೆ ಯುವಜನತೆ, ಬೆಲೆ ಏರಿಕೆಯಿಂದ ಪರಿಹಾರ ನೀಡುವಂತೆ ಮಹಿಳೆಯರು ಕೇಳುತ್ತಿದ್ದಾರೆ. ಆದರೆ ಅವರ ಅಳಲನ್ನು ಯಾರೂ ಆಲಿಸುತ್ತಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿಕೇನರ್ ಕ್ಷೇತ್ರದಿಂದ ಗೋವಿಂದ ರಾಮ್ ಮೇಘವಲ್ ಹಾಗೂ ಗಂಗಾನಗರ ಕ್ಷೇತ್ರದಿಂದ ಕುಲದೀಪ್ ಸಿಂಗ್ ಇಂದೋರಾ ಅವರನ್ನು ಬೆಂಬಲಿಸಿ ರಾಜಸ್ಥಾನದ ಬಿಕೇನರ್ನಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಮುಂದಿನ ಲೋಕಸಭಾ ಚುನಾವಣೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕುರಿತು ನಡೆಯಲಿದೆ. ಇದು ಹಿಂದುಳಿದ ವರ್ಗಗಳ, ದಲಿತರ, ಬಡಕಟ್ಟು ಜನರ ಹಾಗೂ ಸಾಮಾನ್ಯ ವರ್ಗದಲ್ಲಿರುವ ಬಡವರ ಚುನಾವಣೆಯಾಗಲಿದೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ ಉದ್ಯಮಿಗಳಿಂದ ಹಣ ಸುಲಿಗೆ ಮಾಡಿದೆ ಎಂದು ಆರೋಪಿಸಿದ ಅವರು, ಮುಂದಿನ ಚುನಾವಣೆ ದೇಶದ ಬಡ ಜನರು ಹಾಗೂ 22-25 ಶತಕೋಟ್ಯಧಿಪತಿಗಳ ನಡುವಿನ ಸಮರವಾಗಲಿದೆ ಎಂದರು.

ದೇಶದ ಇಂದಿನ ಎರಡು ಅತಿ ದೊಡ್ಡ ಸಮಸ್ಯೆಗಳೆಂದರೆ, ನಿರುದ್ಯೋಗ ಹಾಗೂ ಬೆಲೆ ಏರಿಕೆ. ಆದರೆ, ಈ ವಿಷಯದ ಕುರಿತು ಮಾಧ್ಯಮಗಳು ಪ್ರಶ್ನೆಗಳನ್ನೇ ಎತ್ತುತ್ತಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳ ಕುರಿತು ಗಮನ ಸೆಳೆದ ರಾಹುಲ್ ಗಾಂಧಿ, ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು 15-20 ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಈ ಹಣವನ್ನು ಎಂಜಿಎನ್ಆರ್ಇಜಿಎಯ ವೇತನವನ್ನು 24 ವರ್ಷಗಳ ಕಾಲ ನೀಡಲು ಬಳಸಬಹುದಿತ್ತು ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News