ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯ ತಂದೆಯ ಮೃತದೇಹ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾನ್ಪುರ : ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಇಬ್ಬರು ಹದಿಹರೆಯದ ಹುಡುಗಿಯರು ಆತ್ಮಹತ್ಯೆಗೈದ ಕೆಲವೇ ದಿನಗಳಲ್ಲಿ, ಸಂತ್ರಸ್ತೆಯೊಬ್ಬರ ತಂದೆ ಹಮೀರ್ಪುರ್ ಜಿಲ್ಲೆಯ ತನ್ನ ಮನೆ ಸಮೀಪದ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಐವತ್ತು ವರ್ಷದ ಈ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿನಾಲ್ಕು ಮತ್ತು ಹದಿನಾರು ವರ್ಷದ ಬಾಲಕಿಯರು ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲೆಂದು ತಮ್ಮ ಕುಟುಂಬಗಳೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಅವರ ಮೇಲೆ ಅತ್ಯಾಚಾರವೆಸಗಲಾಗಿತ್ತು ಎನ್ನಲಾಗಿದೆ. ಅವರ ಮೃತದೇಹಗಳು ಶನಿವಾರ ಘಟಂಪುರ್ ಗ್ರಾಮದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅವರನ್ನು ಆರೋಪಿಗಳು ಬೆದರಿಸಿದ ನಂತರ ಅವರು ಆತ್ಮಹತ್ಯೆಗೈದಿದ್ದಾರೆಂದು ಅವರ ಕುಟುಂಬಗಳು ಆರೋಪಿಸಿವೆ.
ಘಟನೆ ಸಂಬಂಧ ಇಟ್ಟಿಗೆ ಕಾರ್ಖಾನೆಯ ಗುತ್ತಿಗೆದಾರ ರಾಮರೂಪ್ ನಿಷದ್, ಆತನ ಪುತ್ರ ರಾಜು ಮತ್ತು ಸೋದರಳಿಯ ಸಂಜಯ್ ಎಂಬವರನ್ನು ಬಂಧಿಸಲಾಗಿದೆ.