ಹೇಮಂತ್ ಸೋರೆನ್ ಬಂಧನ ವಿರೋಧಿಸಿ ಆದಿವಾಸಿಗಳ ಹಬ್ಬದಲ್ಲಿ ಟ್ಯಾಬ್ಲೋ ಪ್ರದರ್ಶನ: ಎಫ್ಐಆರ್ ದಾಖಲು

Update: 2024-04-13 08:16 GMT

Photo credit: telegraphindia.com

ಹೊಸದಿಲ್ಲಿ: ಆದಿವಾಸಿಗಳ ಸರಹುಲ್ ಹಬ್ಬದ ಅಂಗವಾಗಿ ಗುರುವಾರ ಸಂಜೆ ನಡೆದ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಟ್ಯಾಬ್ಲೋ ಪ್ರದರ್ಶಿಸಿರುವ ವಿರುದ್ಧ ರಾಂಚಿ ಆಡಳಿತವು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿದೆ.

ಶುಕ್ರವಾರ ಎಫ್‌ಐಆರ್ ದಾಖಲಾಗಿದ್ದು, ಅಧಿಕಾರಿಗಳು ರಾಜ್ಯದ ಆಡಳಿತರೂಢ ಸರ್ಕಾರದ ವಿರುದ್ಧ ಚುನಾವಣಾ ಆಯೋಗದ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜೆಎಂಎಂ ಆರೋಪಿಸಿದೆ.

ವರದಿಗಳ ಪ್ರಕಾರ, ಸರ್ಹುಲ್ ಮೆರವಣಿಗೆ ನಡೆಸಿದ್ದಕ್ಕಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಲಾದ ರಾಂಚಿ ಜಿಲ್ಲಾ ಶಿಕ್ಷಣಾಧಿಕಾರಿ ವಿನಯ್ ಕುಮಾರ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ನಡೆಸಿದ ಆರೋಪದ ಮೇಲೆ ಅರಗೋರಾ ಪೊಲೀಸ್ ಠಾಣೆಯಲ್ಲಿ 24 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಟ್ಯಾಬ್ಲೋ ದಲ್ಲಿ “ಜೈಲು ಬೀಗ ಮುರಿದು, ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡುತ್ತೇವೆ” ಎಂದು ಬರೆಯಲಾಗಿತ್ತು ಎಂದು ವರದಿಯಾಗಿದೆ.

ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಧಾರ್ಮಿಕ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಗಿದೆ ಎಂದು ಕೇಂದ್ರ ಸರನಾ ಸಮಿತಿಯ ಅಧ್ಯಕ್ಷ ಫೂಲ್‌ಚಂದ್ ಟಿರ್ಕಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವಿನಯ್ ಕುಮಾರ್ ದೂರಿನ ಮೇರೆಗೆ ಮೆರವಣಿಗೆ ನಡೆಸಿದ ಕೇಂದ್ರ ಸರನಾ ಸಮಿತಿಯ ವಿರುದ್ಧ ಅರಗೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ರ್ಯಾಲಿಯ ಆಯೋಜಕರು ರಾಜಕೀಯ ವಿಷಯಗಳನ್ನು ಎತ್ತಲು ಧಾರ್ಮಿಕ ಸಂದರ್ಭವನ್ನು ಬಳಸಿದ್ದರಿಂದ ನಾವು ದೂರು ನೀಡಲು ನಿರ್ಧರಿಸಿದ್ದೇವೆ, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ" ಎಂದು ವಿನಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಸರ್ನಾ ಸಮಿತಿಯ ಬುಡಕಟ್ಟು ನಾಯಕ ಅಜಯ್ ಟಿರ್ಕಿ, “ಕಲ್ಪಿತ ಭೂ ಹಗರಣದ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸುವುದರ ವಿರುದ್ಧ ಬಹುಪಾಲು ಆದಿವಾಸಿಗಳ ಭಾವನೆಗಳ ಪ್ರದರ್ಶನವಾಗಿತ್ತು. ರ್ಯಾಲಿಯಲ್ಲಿ ಪಕ್ಷದ ಧ್ವಜ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರುಗಳನ್ನು ಬಳಸಲಿಲ್ಲ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಭಾವನೆಗಳನ್ನು ತೋರಿಸುವುದು ಕಾನೂನುಬಾಹಿರವೇ?” ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News