ರೈತರ ಮೇಲೆ ಅಶ್ರುವಾಯು ದಾಳಿ ಖಂಡನೀಯ; ಕೇಂದ್ರ ಸರಕಾರ ರೈತರ ಬೇಡಿಕೆಗಳಿಗೆ ಕಿವಿಗೊಡಬೇಕು: ರಾಹುಲ್ ಗಾಂಧಿ
ಹೊಸದಿಲ್ಲಿ: ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಗಡಿ ಬಳಿ ಪ್ರತಿಭಟಿಸುತ್ತಿರುವ ರೈತರ ಮೇಲಿನ ಪೊಲೀಸರ ಕ್ರಮವನ್ನು ಖಂಡಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ದಾಳಿ ನಡೆಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಸರಕಾರದ ಬಳಿ ತಮ್ಮ ಬೇಡಿಕೆಗಳನ್ನು ಮಂಡಿಸಲು ಹಾಗೂ ತಮ್ಮ ನೋವನ್ನು ತೋಡಿಕೊಳ್ಳಲು ರೈತರು ದಿಲ್ಲಿಗೆ ಆಗಮಿಸಲು ಬಯಸುತ್ತಿದ್ದಾರೆ. ಅವರ ಮೇಲೆ ಅಶ್ರುವಾಯು ಶೆಲ್ ದಾಳಿ ನಡೆಸಿ, ವಿವಿಧ ಕ್ರಮಗಳ ಮೂಲಕ ಅವರನ್ನು ತಡೆಯಲು ಯತ್ನಿಸಿರುವುದು ಖಂಡನೀಯ. ಸರಕಾರ ರೈತರ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಪ್ರತಿ ಗಂಟೆಗೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಗಮನಿಸುವ ಮೂಲಕ ಅವರ ನೋವನ್ನು ಅರ್ಥ ಮಾಡಿಕೊಳ್ಳಬಹುದು. ಮೋದಿ ಸರಕಾರದ ತೀವ್ರ ನಿರ್ಲಕ್ಷ್ಯ ಮತ್ತು ಕಡೆಗಣನೆಯಿಂದ ರೈತರ ಪ್ರಥಮ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದನ್ನು ನಾವು ಮರೆಯಬಾರದು” ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಶುಕ್ರವಾರ ಹರ್ಯಾಣ ಪೊಲೀಸರು ನಡೆಸಿದ ಅಶ್ರುವಾಯು ಶೆಲ್ ದಾಳಿಯಲ್ಲಿ ಹಲವು ರೈತರು ಗಾಯಗೊಂಡಿದ್ದರಿಂದ, ಶಂಭು ಗಡಿ ಬಳಿ ಪ್ರತಿಭಟಿಸುತ್ತಿರುವ ರೈತರು ತಮ್ಮ ದಿಲ್ಲಿ ಚಲೊವನ್ನು ಅಮಾನತುಗೊಳಿಸಿದ್ದಾರೆ. ರವಿವಾರದಿಂದ ದಿಲ್ಲಿ ಚಲೊ ಪುನಾರಂಭಗೊಳ್ಳಲಿದೆ.