ಗೃಹ ಬಂಧನದ ವೇಳೆ ಒದಗಿಸಿದ ಭದ್ರತೆಗಾಗಿ ರೂ. 1.64 ಕೋಟಿ ಪಾವತಿಸುವಂತೆ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾಗೆ ಸೂಚಿಸಿದ ಎನ್ಐಎ

Update: 2024-03-08 10:58 GMT

ಗೌತಮ್ ನವ್ಲಾಖಾ | Photo: scroll.in

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಗೃಹ ಬಂಧನದಲ್ಲಿದ್ದ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾಗೆ ಒದಗಿಸಲಾಗಿದ್ದ ಭದ್ರತೆಗಾಗಿ ಅವರು ರೂ. 1.64 ಕೋಟಿ ರೂಪಾಯಿಯನ್ನು ಪಾವತಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಗುರುವಾರ ತಿಳಿಸಿದೆ ಎಂದು ವರದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಗೌತಮ್ ಅವರ ವಕೀಲೆ ನಿತ್ಯಾ ರಾಮಕೃಷ್ಣನ್, ರಾಷ್ಟ್ರೀಯ ತನಿಖಾ ದಳವು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

“ನಾವು ಅವರು ಪಾವತಿಸಬೇಕಿರುವ ಮೊತ್ತದ ಕುರಿತು ಪ್ರಶ್ನಿಸಿದ್ದೇವೆ ಹಾಗೂ ಈ ಪ್ರಕರಣದ ವಿಚಾರಣೆ ನಡೆಯಬೇಕಿದೆ” ಎಂದು ನಿತ್ಯಾ ರಾಮಕೃಷ್ಣನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. “ನಾಗರಿಕರೊಬ್ಬರನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಕ್ಕೆ ಅವರು ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಡಬಾರದು” ಎಂದು ಅವರು ವಾದಿಸಿದರು.

ಇದಕ್ಕೆ ಪ್ರತಿಯಾಗಿ, “ತಮ್ಮ ಗೃಹಬಂಧನಕ್ಕೆ ಪ್ರತಿಯಾಗಿ ನವ್ಲಾಖಾ ಇಲ್ಲಿಯವರೆಗೆ ಕೇವಲ ರೂ. 10 ಲಕ್ಷ ಪಾವತಿಸಿದ್ದಾರೆ. ಅವರು ಮೊದಲು ತಮ್ಮ ಮೊತ್ತವನ್ನು ಪಾವತಿಸಬೇಕು. ನಾಗರಿಕರಿಗೆ ಗೃಹ ಬಂಧನದ ಮಾ‍ನ್ಯತೆ ದೊರೆಯುವುದಿಲ್ಲ” ಎಂದು ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದಿಸಿದರು.

ಗೌತಮ್ ನವ್ಲಾಖಾ ರೂ. 1.64 ಕೋಟಿಯನ್ನು ಪಾವತಿಸಬೇಕು ಎಂಬ ರಾಷ್ಟ್ರೀಯ ತನಿಖಾ ದಳದ ವಾದವನ್ನು ಎಪ್ರಿಲ್ ವಿಚಾರಣೆಯ ಸಂದರ್ಭದಲ್ಲಿ ಇತ್ಯರ್ಥ ಪಡಿಸಲಾಗುವುದು. ಅಲ್ಲಿಯವರೆಗೆ ಅವರು ತನಿಖಾ ತಂಡದ ವಶದಲ್ಲೇ ಇರುತ್ತಾರೆ ಎಂದು ನ್ಯಾಯಪೀಠವು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News