ಮಹಾ ವಿಕಾಸ್ ಅಘಾಡಿ ನಾಯಕರ ವಿರುದ್ಧ ಹೇಳಿಕೆ ನೀಡುವಂತೆ ಬಲವಂತ | ಅನಿಲ್ ದೇಶ್ ಮುಖ್ ಹೇಳಿಕೆಯಲ್ಲಿ ಸತ್ಯಾಂಶವಿರುವಂತಿದೆ : ನಾನಾ ಪಟೋಲೆ

Update: 2024-07-25 15:31 GMT

ನಾನಾ ಪಟೋಲೆ | PTI 

ನಾಗಪುರ : ಹಿಂದಿನ ಮಹಾ ವಿಕಾಸ್ ಅಘಾಡಿ ಸರಕಾರದ ಪ್ರಮುಖ ನಾಯಕರ ವಿರುದ್ಧ ಹೇಳಿಕೆ ನೀಡುವಂತೆ ತನ್ನ ಮೇಲೆ ಒತ್ತಡವಿತ್ತು ಎಂದು ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿರುವಂತಿದೆ ಎಂದು ಗುರುವಾರ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲ್ ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿಯ ಆಡಳಿತದ ವಿರುದ್ಧ ಇರುವವರನ್ನು ಸುಳ್ಳು ಆರೋಪಗಳಲ್ಲಿ ಭಾರಿ ಪ್ರಮಾಣದಲ್ಲಿ ಜೈಲಿಗೆ ಹಾಕುವ ಪ್ರಯೋಗ ಜಾರಿಯಲ್ಲಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲೂ ಕೂಡಾ ಈ ಪ್ರಯೋಗ ನಡೆದಿದ್ದು, ಆಡಳಿತ ಪಕ್ಷದಿಂದ ಹೆಜ್ಜೆ ಹೊರ ಹಾಕಿದವರಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಪಟೋಲೆ ಹೇಳಿದರು.

ಮಹಾರಾಷ್ಟ್ರದಲ್ಲಿನ ಬಿಜೆಪಿ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳಿಗೆ ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳದ ತನಿಖೆ ನಡೆಸುವ ಬೆದರಿಕೆ ಒಡ್ಡಲಾಗಿದೆ ಎಂದು ಅವರು ಆಪಾದಿಸಿದರು.

ಅನಿಲ್ ದೇಶ್ ಮುಖ್ ವಿರುದ್ಧ ಯಾವುದಾದರೂ ವಿಡಿಯೊ ಸಾಕ್ಷ್ಯವಿದ್ದರೆ, ಹಾಲಿ ರಾಜ್ಯ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಈ ಕೂಡಲೇ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿರುವ ನಾನಾ ಪಟೋಲೆ, ಬಿಜೆಪಿ ನಾಯಕರೇನಾದರೂ, ಆ ಸಾಕ್ಷ್ಯವನ್ನು ಮತ್ತೊಂದು ಬಗೆಯಲ್ಲಿ ಬಳಸಿಕೊಳ್ಳಲು ಸಮಯ ಕಾಯುತ್ತಿದ್ದಾರೆಯ ಎಂದೂ ಪ್ರಶ್ನಿಸಿದರು.

ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಬಾರದೆಂದರೆ, ಮಹಾ ವಿಕಾಸ್ ಅಘಾಡಿ ಸರಕಾರದ ಪ್ರಮುಖ ನಾಯಕರ ವಿರುದ್ಧ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಫಡ್ನವಿಸ್ ರ ಮಧ್ಯವರ್ತಿಯೊಬ್ಬರು ನನಗೆ ಸೂಚಿಸಿದ್ದರು ಎಂದು ಬುಧವಾರ ದೇಶ್ ಮುಖ್ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ದೇವೇಂದ್ರ ಫಡ್ನವಿಸ್ ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News