ವಿದೇಶಿ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಪತಿಗೆ 10 ಲಕ್ಷ ರೂ. ಪರಿಹಾರ ಹಸ್ತಾಂತರಿಸಿದ ಜಾರ್ಖಂಡ್ ಪೊಲೀಸರು
ಡುಮ್ಕಾ (ಜಾರ್ಖಂಡ್): ಶುಕ್ರವಾರ ಡುಮ್ಕಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಸ್ಪ್ಯಾನಿಶ್ ಮಹಿಳೆಯ ಪತಿಗೆ ಜಾರ್ಖಂಡ್ ಪೊಲೀಸರು ರೂ. 10 ಲಕ್ಷ ಪರಿಹಾರವನ್ನು ಹಸ್ತಾಂತರಿಸಿದ್ದಾರೆ.
ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳದ ಮೂಲಕ ನೇಪಾಳಕ್ಕೆ ತೆರಳುತ್ತಿದ್ದ ಸ್ಪ್ಯಾನಿಶ್ ಮಹಿಳೆಯ ಮೇಲೆ ಹಂಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತ ಆಂಜನೇಯುಲು ದೊಡ್ಡೆ, “ನಾವು ತ್ವರಿತ ತನಿಖೆ ನಡೆಸಿದ್ದೇವೆ ಹಾಗೂ ಜಿಲ್ಲಾಡಳಿತದ ವತಿಯಿಂದ ಎಲ್ಲ ಬಗೆಯ ನೆರವನ್ನು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಪತಿಗೆ ಒದಗಿಸಲಾಗಿದೆ. ಸಂತ್ರಸ್ತೆ ಪರಿಹಾರ ಯೋಜನೆಯಡಿ ನಾವು ಅವರಿಗೆ ರೂ. 10 ಲಕ್ಷ ಪರಿಹಾರವನ್ನು ನೀಡಿದ್ದೇವೆ. ನಾವು ತ್ವರಿತ ವಿಚಾರಣೆಗೆ ಪ್ರಯತ್ನಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿಯು ಬೈಕ್ ಮೂಲಕ ಭಾರತದಾದ್ಯಂತ ಪ್ರವಾಸ ಕೈಗೊಂಡಿದ್ದರು ಹಾಗೂ ಅವರು ಕುರ್ಮಹತ್ ಗ್ರಾಮದ ಬಳಿ ಟೆಂಟ್ ನಲ್ಲಿ ವಿಶ್ರಮಿಸಿದ್ದಾಗ ಈ ಘಟನೆ ನಡೆದಿದೆ.