ಮೇ ತಿಂಗಳಲ್ಲಿ ತಗ್ಗಿದ ಔಪಚಾರಿಕ ಉದ್ಯೋಗ ಸೃಷ್ಟಿ: ಇಪಿಎಫ್ಒ ದತ್ತಾಂಶದಿಂದ ಬಹಿರಂಗ

Update: 2023-07-21 14:14 GMT

Representational Image

ಹೊಸದಿಲ್ಲಿ: ಮೇ ತಿಂಗಳಲ್ಲಿ ಔಪಚಾರಿಕ ಉದ್ಯೋಗ ಸೃಷ್ಟಿ ತಗ್ಗಿದೆ ಎಂಬ ಸಂಗತಿ ಗುರುವಾರ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಬಿಡುಗಡೆ ಮಾಡಿರುವ ವೇತನ ಪಟ್ಟಿ ದತ್ತಾಂಶದಿಂದ ಬಹಿರಂಗಗೊಂಡಿದೆ. ನೂತನ ಆರ್ಥಿಕ ವರ್ಷದ ಆರಂಭದಲ್ಲಿ ಇದು ಕೊಂಚ ಮಟ್ಟಿಗೆ ಚೇತರಿಸಿಕೊಂಡಿತ್ತು ಎಂದು Business Standard ಪತ್ರಿಕೆ ವರದಿ ಮಾಡಿದೆ.

ಎಪ್ರಿಲ್ ತಿಂಗಳಲ್ಲಿ ಕಾರ್ಮಿಕ ಭವಿಷ್ಯ ನಿಧಿಗೆ 891,974 ಚಂದಾದಾರರು ನೋಂದಾಯಿಸಿಕೊಂಡಿದ್ದರೆ, ಮೇ ತಿಂಗಳಲ್ಲಿ ಈ ಪ್ರಮಾಣದಲ್ಲಿ ಶೇ. 1ರಷ್ಟು ಅಲ್ಪ ಕುಸಿತ ಕಂಡಿದ್ದು, 883,176 ಚಂದಾದಾರರು ನೋಂದಾಯಿಸಿಕೊಂಡಿದ್ದಾರೆ. ಹೀಗಿದ್ದೂ ಎಪ್ರಿಲ್ ತಿಂಗಳಲ್ಲಿ ಶೇ. 64.6ರಷ್ಟು ನೋಂದಣಿಯಾಗಿದ್ದ ಕಿರಿಯ ವಯಸ್ಸಿನ (18-28 ವರ್ಷ) ಹೊಸ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ ಏರಿಕೆ ಕಂಡಿದ್ದು, ಶೇ. 66.8ಕ್ಕೆ ತಲುಪಿದೆ.

ಎಪ್ರಿಲ್ ತಿಂಗಳಲ್ಲಿ ಶೇ. 26.5ರಷ್ಟಿದ್ದ ಮಹಿಳಾ ಚಂದಾದಾರರ ಸಂಖ್ಯೆ, ಮೇ ತಿಂಗಳಲ್ಲಿ ತುಸು ಇಳಿಕೆ ದಾಖಲಿಸಿದ್ದು, ಶೇ. 25.03ಕ್ಕೆ ತಲುಪಿದೆ.

ಈ ಹಿಂಜರಿತದ ಕುರಿತು Business Standard ಪತ್ರಿಕೆಗೆ ವಿವರಿಸಿರುವ ಇಂಡಿಯನ್ ಸ್ಟ್ಯಾಫಿಂಗ್ ಫೆಡರೇಶನ್ ಅಧ್ಯಕ್ಷ ಲೊಹಿತ್ ಭಾಟಿಯಾ, "ಮೇ ತಿಂಗಳು ಮಾನ್ಸೂನ್ ಮುಂಗಾರಿನೊಂದಿಗೆ ಕಾಕತಾಳೀಯ ಸಂಬಂಧ ಹೊಂದಿದ್ದು, ಈ ಅವಧಿಯಲ್ಲಿ ಸಾಮಾಜಿಕ ಭದ್ರತೆ ಸಂಘಟನೆಯ ಕವಚವನ್ನು ತೊರೆದು ಭಾರಿ ಸಂಖ್ಯೆಯ ಜನರು ಗ್ರಾಮೀಣ ಪ್ರದೇಶಗಳಿಗೆ ಮರು ವಲಸೆ ನಡೆಸುತ್ತಾರೆ. ಇದಕ್ಕಿಂತ, ಹಬ್ಬಗಳ ಋತು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಅವಧಿಯಲ್ಲಿ ಸಂಸ್ಥೆಗಳು ಸಾಮಾನ್ಯವಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂಜರಿಯುತ್ತವೆ" ಎಂದು ಹೇಳಿದ್ದಾರೆ.

ಈ ನಡುವೆ, ಎಪ್ರಿಲ್ ತಿಂಗಳಲ್ಲಿ ಶೇ. 8.11ರಷ್ಟಿದ್ದ ನಿರುದ್ಯೋಗ ಪ್ರಮಾಣವು ಮೇ ತಿಂಗಳಲ್ಲಿ ಶೇ. 7.7ಕ್ಕೆ ಕುಸಿದಿರುವುದನ್ನು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ(Centre for Monitoring Indian Economy) ಗುರುತಿಸಿದೆ. ಆದರಿದು, ಉದ್ಯೋಗಿ ಸಮೂಹ ಭಾಗವಹಿಸುವಿಕೆ ದರವು ಶೇ. 40.7ರಿಂದ ಶೇ. 39.6ಕ್ಕೆ ಕುಸಿದಿರುವುದರಿಂದ ಆಗಿರುವುದೇ ಹೊರತು, ಉದ್ಯೋಗ ಸೃಷ್ಟಿಯಾಗಿರುವ ಕಾರಣಕ್ಕಲ್ಲ.

"ಉದ್ಯೋಗಿ ಸಮೂಹಕ್ಕೆ ದೊಡ್ಡ ಸಂಖ್ಯೆಯ ಜನರು ಪ್ರವೇಶಿಸಿದರೂ, ಅವರ ಪೈಕಿ ಸಣ್ಣ ಪ್ರಮಾಣದ ಜನರು ಮಾತ್ರ ಉದ್ಯೋಗ ಪಡೆಯಲು ಸಾಧ್ಯವಾಗಿದ್ದಕ್ಕೆ ಎಪ್ರಿಲ್ ತಿಂಗಳು ಸಾಕ್ಷಿಯಾಗಿದ್ದರಿಂದ ಮೇ ತಿಂಗಳಲ್ಲಿನ ಉದ್ಯೋಗಿ ಸಮೂಹ ಭಾಗವಹಿಸುವಿಕೆ ದರದಲ್ಲಿನ ಕುಸಿತವು ನಿರೀಕ್ಷಿತವೇ ಆಗಿತ್ತು. ಇದು ಮೇ ತಿಂಗಳಲ್ಲಿ ಉದ್ಯೋಗ ಹುಡುಕಾಟ ನಡೆಸಲು ಹಲವಾರು ಮಂದಿಯನ್ನು ನಿರುತ್ತೇಜನಗೊಳಿಸಿರುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಉದ್ಯೋಗಿ ಸಮೂಹದ ಪ್ರಮಾಣವು 453.5 ದಶಲಕ್ಷದಿಂದ 441.9 ದಶಲಕ್ಷಕ್ಕೆ ಕುಸಿತ ಕಂಡಿದೆ" ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News