ಮಾಜಿ ಚುನಾವಣಾ ಆಯುಕ್ತ ಅರುಣ್‌ ಗೋಯೆಲ್ ಕ್ರೊಯೇಷಿಯಾ ರಾಯಭಾರಿಯಾಗಿ ನೇಮಕ

Update: 2024-09-08 09:42 GMT

ಅರುಣ್‌ ಗೋಯೆಲ್ | PC : PTI

ಹೊಸದಿಲ್ಲಿ : 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಚುನಾವಣಾ ಆಯುಕ್ತ(ಇಸಿ) ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ್ದ ಅರುಣ್‌ ಗೋಯಲ್ ಅವರು ಕ್ರೊಯೇಷಿಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅಧಿಕಾರಾವಧಿಯಲ್ಲಿ ರಾಜತಾಂತ್ರಿಕ ಹುದ್ದೆಗೆ ಮೊದಲ ರಾಜಕೀಯ ನೇಮಕಾತಿಯಾಗಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶನಿವಾರ ಸಂಜೆ ಸಂಕ್ಷಿಪ್ತ ಹೇಳಿಕೆಯಲ್ಲಿ ಗೋಯೆಲ್ ಅವರ ನೇಮಕಾತಿಯನ್ನು ಪ್ರಕಟಿಸಿದೆ.

ಕ್ರೊಯೇಷಿಯಾ ರಾಜಕೀಯವಾಗಿ ಭಾರತಕ್ಕೆ ಪ್ರಮುಖವಲ್ಲದಿದ್ದರೂ ಯುರೋಪ್‌ನಲ್ಲಿ ಅದರ ಸ್ಥಾನದಿಂದಾಗಿ ಅಲ್ಲಿ ರಾಜತಾಂತ್ರಿಕ ನೇಮಕಾತಿ ಅಪೇಕ್ಷಿತವಾಗಿದೆ.

1985ರ ಐಎಎಸ್ ತಂಡದ ಅಧಿಕಾರಿ ಗೋಯೆಲ್ 2022,ನ.17ರಂದು ಆಡಳಿತಾತ್ಮಕ ಸೇವೆಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು ಮತ್ತು ಮರುದಿನವೇ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

ತನ್ನ ಸ್ವಂತ ಆಯ್ಕೆಯ ಮೇರೆಗೆ ಚುನಾವಣಾ ಆಯುಕ್ತರನ್ನು ನೇಮಿಸುವ ಸರಕಾರದ ಹಕ್ಕನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಆರಂಭಿಸುವ ಕೇವಲ ಒಂದು ದಿನದ ಮುನ್ನ ಗೋಯೆಲ್ ನೇಮಕ ನಡೆದಿತ್ತು. ಸರಕಾರದ ಕ್ರಮವು ಚುನಾವಣಾ ಆಯೋಗವು ಕಾರ್ಯಾಂಗದಿಂದ ಸ್ವತಂತ್ರವಾಗಿರಬೇಕೆಂಬ ಸಾಂವಿಧಾನಿಕ ಅಗತ್ಯವನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಗೋಯೆಲ್ ನೇಮಕದ ವಿರುದ್ಧ ಅಸೋಸೊಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತ್ತು. ಸ್ವಯಂ ನಿವೃತ್ತಿ ಅರ್ಜಿಯು ಅಂಗೀಕಾರಗೊಳ್ಳಲು ಮೂರು ತಿಂಗಳು ಬೇಕಾಗುತ್ತದೆ. ಆದರೆ ಸರಕಾರದಿಂದ ಗೋಯೆಲ್ ಅವರ ರಾಜೀನಾಮೆಯ ಅಂಗೀಕಾರ ಮತ್ತು ಚುನಾವಣಾ ಆಯುಕ್ತರಾಗಿ ರಾಷ್ಟ್ರಪತಿಗಳಿಂದ ಅವರ ನೇಮಕ ಒಂದೇ ದಿನದಲ್ಲಿ ಪೂರ್ಣಗೊಂಡಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು.

ಸಾರ್ವತ್ರಿಕ ಚುನಾವಣೆಗಳ ಮೊದಲ ಹಂತವು ಎ.19ರಂದು ಆರಂಭಗೊಳ್ಳುವ ಮೊದಲೇ 2024, ಮಾ.10ರಂದು ಗೋಯೆಲ್ ಚುನಾವಣಾ ಆಯುಕ್ತರ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಗೆ ಯಾವುದೇ ಕಾರಣವಿರಲಿಲ್ಲ. ಇದರಿಂದಾಗಿ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಉಳಿದುಕೊಂಡಿದ್ದರು. ಮರುವಾರವೇ ಪ್ರಧಾನಿ ಮೋದಿ ನೇತೃತ್ವದ ಮೂವರು ಸದಸ್ಯರ ಆಯ್ಕೆ ಸಮಿತಿಯು ಹೊಸದಾಗಿ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕಗೊಳಿಸಿತ್ತು.

ಕ್ರೊಯೇಷಿಯಾ ರಾಯಭಾರಿಯಾಗಿ ಗೋಯೆಲ್ ಅವರ ನಿಯೋಜನೆಯು ಮೋದಿ 2024ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎನ್‌ಡಿಎ ಸರಕಾರದ ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿ ಕೇವಲ ಐದನೇ ರಾಜಕೀಯ ನೇಮಕಾತಿಯಾಗಿರುವುದರಿಂದ ಮಹತ್ವವನ್ನು ಪಡೆದುಕೊಂಡಿದೆ.

ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News