ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ
ತಿರುವನಂತಪುರಂ: ಕಾಂಗ್ರೆಸ್ ಮುತ್ಸದ್ಧಿ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹಾಗೂ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಪ್ರಕಟಿಸಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
"ಪ್ರೀತಿಯ ಅಗಾಧ ಶಕ್ತಿ ಮೂಲಕ ವಿಶ್ವದ ಎಲ್ಲೆಡೆ ಪ್ರಭಾವ ಬೀರಿದ್ದ ರಾಜನ ಕಥೆ ಅಂತ್ಯ ಕಂಡಿದೆ. ದಂತಕಥೆಯಾಗಿದ್ದ ಮಹಾನ್ ನಾಯಕ ಒಮನ್ ಚಾಂಡಿ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಅಸಂಖ್ಯಾತ ಜನರ ಬದುಕನ್ನು ತಲುಪಿದ್ದರು. ಅವರ ಪರಂಪರೆ ನಮ್ಮ ಆತ್ಮಗಳಲ್ಲಿ ಸದಾ ಅನುರಣಿಸುತ್ತಿರುತ್ತದೆ; ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂಧು ಸುಧಾಕರನ್ ಟ್ವೀಟ್ ಮಾಡಿದ್ದಾರೆ.
ಎರಡು ಅವಧಿಗೆ ಕೇರಳ ಮುಖ್ಯಮಂತ್ರಿಯಾಗಿದ್ದ ಚಾಂಡಿ, ಬೆಂಗಳೂರಿನಲ್ಲಿ ಮಂಗಳವಾರ ನಸುಕಿನಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಪ್ರಕಟಿಸಿದ್ದಾರೆ. ಅವರ ನಿಧನವನ್ನು ಮಗ ಚಾಂಡಿ ಒಮನ್ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ. "ಅಪ್ಪ ಕೊನೆಯುಸಿರೆಳೆದಿದ್ದಾರೆ: ಎಂದು ಒಮನ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದಿದ್ದು, ಯಾವುದೇ ವಿವರಗಳನ್ನು ನೀಡಿಲ್ಲ. ಚಾಂಡಿ ಎಲ್ಲ ಪೀಳಿಗೆಯವರ ಮತ್ತು ವರ್ಗಗಳ ಅತ್ಯಂತ ನಾಯಕನಾಗಿದ್ದರು ಎಂದು ಕೇರಳ ಕಾಂಗ್ರೆಸ್ ಹೇಳಿದೆ.
2004-06 ಮತ್ತು 2011-16ರ ಅವಧಿಯಲ್ಲಿ ಕೇರಳ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. 27ನೇ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗುವ ಮೂಲಕ 1970ರಲಿ ರಾಜಕೀಯ ರಂಗ ಪ್ರವೇಶಿಸಿದ ಅವರು, ಆ ಬಳಿಕ ನಿರಂತರ 11 ಬಾರಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಐದು ದಶಕಗಳಿಂದ ತಮ್ಮ ಸ್ವಕ್ಷೇತ್ರ ಪುತ್ತುಪಳ್ಳಿಯನ್ನು ಚಾಂಡಿ ಪ್ರತಿನಿಧಿಸುತ್ತಾ ಬಂದಿದ್ದಾರೆ.
2022ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪುತ್ತುಪಳ್ಳಿ ಕ್ಷೇತ್ರವನ್ನು 18728 ದಿನಗಳಿಂದ ಪ್ರತಿನಿಧಿಸುವ ಮೂಲಕ ಸುಧೀರ್ಘ ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಾಜಿ ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ದಿವಂಗತ ಕೆ.ಎಂ.ಮಣಿ ಅವರ ದಾಖಲೆಯನ್ನು ಇವರು ಮುರಿದಿದ್ದರು.
ವಿವಿಧ ಸಂಪುಟಗಳಲ್ಲಿ ನಾಲ್ಕು ಬಾರಿ ಸಚಿವರಾಗಿದ್ದ ಅವರು, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿಯೂ ನಾಲ್ಕು ಬಾರಿ ಕಾರ್ಯ ನಿರ್ವಹಿಸಿದ್ದರು.