ಒಂದೇ ದಿನದಲ್ಲಿ 95 ವಿಮಾನಗಳಿಗೆ ಬಾಂಬ್ ಬೆದರಿಕೆ!
ಹೊಸದಿಲ್ಲಿ: ಕಳೆದ 10 ದಿನಗಳಿಂದ ಭಾರತದ ವಿಮಾನಯಾನ ಸಂಸ್ಥೆಗಳಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದೆ. ಗುರುವಾರ ಒಂದೇ ದಿನದಲ್ಲಿ ಕನಿಷ್ಠ 95 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ವರದಿಯಾಗಿದೆ.
ಕಳೆದ 10 ದಿನಗಳಿಂದ 260ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ಬೆಳವಣಿಗೆ ವಿಮಾನಗಳ ಭದ್ರತೆ ಮತ್ತು ನಿರ್ವಹಣೆ ಮೇಲೆ ಪ್ರಭಾವ ಬೀರಿದೆ. ನೂರಾರು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ. ಅರೆಸೇನಾ ಸಿಬ್ಬಂದಿ ಮತ್ತು ವಿಮಾನಯಾನ ಅಧಿಕಾರಿಗಳಿಗೆ ಭದ್ರತೆ ಕುರಿತು ತಲೆನೋವು ಸೃಷ್ಟಿಸಿದೆ.
ಆಕಾಶ ಏರ್, ಏರ್ ಇಂಡಿಯಾ, ಇಂಡಿಗೋ ಮತ್ತು ವಿಸ್ತಾರಾ ವಿಮಾನಯಾನ ಸಂಸ್ಥೆಗಳ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ನೀಡಲಾಗಿದೆ. ಈ ಕುರಿತು 8 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ಸರಣಿ ಬೆದರಿಕೆ ಕರೆಯ ಹಿನ್ನೆಲೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(ಬಿಸಿಎಎಸ್) ಅ. 19ರಂದು ದಿಲ್ಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಸಿಇಒಗಳ ಸಭೆ ನಡೆಸಿತ್ತು.