ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ | ಪ್ರಮುಖ ಆರೋಪಿ ಬೇಡಿ ರಾಮ್‌ಗೆ ಪ್ರಶ್ನೆ ಪತ್ರಿಕೆ ಸೋರಿಕೆಯ ದೀರ್ಘ ಇತಿಹಾಸ

Update: 2024-06-28 17:09 GMT

                                                                ಬೇಡಿ ರಾಮ್‌ |  PC : X  \ @BediRam5

ಲಕ್ನೊ: ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉತ್ತರ ಪ್ರದೇಶದ ಶಾಸಕ ಬೇಡಿ ರಾಮ್, 2006ರಲ್ಲಿ ಬಹಿರಂಗಗೊಂಡಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿ, ನಂತರ ತಮ್ಮ ಉದ್ಯೋಗದಿಂದ ವಜಾಗೊಂಡಿದ್ದ ಮಾಜಿ ರೈಲ್ವೆ ಉದ್ಯೋಗಿಯಾಗಿದ್ದ ಎಂದು ವರದಿಯಾಗಿದೆ.

ಹಲವಾರು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಬೇಡಿ ರಾಮ್ ಮೇಲಿದೆ. ರೈಲ್ವೆ ನೇಮಕಾತಿ ಮಂಡಳಿಯು ಆಯೋಜಿಸಿದ್ದ ಲೋಕೋ ಪೈಲಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಸಂಬಂಧ ಬೇಡಿ ರಾಮ್ ಹಾಗೂ ಆತನ ಸಹಚರರನ್ನು 2008ರಲ್ಲಿ ಬಂಧಿಸಲಾಗಿತ್ತು.

ಒಂದು ವರ್ಷದ ನಂತರ ಸ್ಟೇಷನ್ ಮಾಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬೇಡಿ ರಾಮ್‌ ನನ್ನು ಮತ್ತೆ ಬಂಧಿಸಲಾಗಿತ್ತು. ರೈಲ್ವೆ ನೇಮಕಾತಿ ಮಂಡಳಿಯು ಆಯೋಜಿಸಿದ್ದ ಲೋಕೋ ಪೈಲಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(STF)ಯು ಮತ್ತೆ 2014ರಲ್ಲಿ ಬೇಡಿ ರಾಮ್‌ ನನ್ನು ಬಂಧಿಸಿತ್ತು.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ಬಿಜೆಪಿಯ ಮೈತ್ರಿ ಪಕ್ಷವಾದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿದ್ದ ಬೇಡಿ ರಾಮ್, ತನ್ನ ವಿರುದ್ಧ ಎಂಟು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿಯುಳಿದಿದೆ ಎಂದು ಘೋಷಿಸಿಕೊಂಡಿದ್ದ.

ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯ ನಿವಾಸಿಯಾದ ಬೇಡಿ ರಾಮ್ ಹೆಸರು ಮಧ್ಯಪ್ರದೇಶದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಕೇಳಿ ಬಂದಿತ್ತು. ಅವರ ವಿರುದ್ಧ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಹಲವಾರು ಮಂದಿ ನನಗೆ ಹಣ ನೀಡುವ ಮೂಲಕ ಉದ್ಯೋಗ ಗಳಿಸಿದ್ದಾರೆ ಎಂದು ಬೇಡಿ ರಾಮ್ ಹೇಳುತ್ತಿರುವ ವೀಡಿಯೊ ಸದ್ಯ ವೈರಲ್ ಆಗಿದೆ. ಅವರು ಮತ್ತೊಬ್ಬ ವ್ಯಕ್ತಿಯೊಂದಿಗೆ ಉದ್ಯೋಗ ಕೊಡಿಸಲು ಪಾವತಿಸಬೇಕಾದ ಹಣದ ಕುರಿತು ಚರ್ಚಿಸುತ್ತಿರುವುದೂ ಕೂಡಾ ಆ ವೀಡಿಯೊದಲ್ಲಿ ಕಂಡು ಬಂದಿದೆ.

ಮೂಲಗಳ ಪ್ರಕಾರ, ಹಲವು ವರ್ಷಗಳ ಅವಧಿಯಲ್ಲಿ ರಾಮ್ ಭಾರಿ ಸಂಪತ್ತನ್ನು ಕ್ರೋಡೀಕರಿಸಿದ್ದು, ಲಕ್ನೊ ಮತ್ತು ಜೌನ್‌ಪುರ್‌ಗಳಲ್ಲಿ ಹಲವಾರು ಮನೆಗಳು, ಜಮೀನುಗಳು ಹಾಗೂ ಫ್ಲ್ಯಾಟ್‌ಗಳನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಎಂದು ಆರೋಪಿಸಲಾಗಿರುವ ಬೇಡಿ ರಾಮ್, ಹೇಗೆ ರಾಜಕೀಯ ಪ್ರವೇಶಿಸಿದ ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಟಿಕೆಟ್ ಗಿಟ್ಟಿಸಿದ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.‌ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ನಾಯಕರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬೇಡಿ ರಾಮ್ ಭಾಗಿಯಾಗಿರುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದಾರಾದರೂ, ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು ರಾಮ್ ಯಾರಿಗೆ ಬೇಕಾದರೂ ಉದ್ಯೋಗ ಕೊಡಿಸಬಲ್ಲರು ಎಂದು ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ. ಹೀಗಾಗಿ ಸುಹೇಲ್ ದೇವ್ ಭಾರತೀಯ ಜನತಾ ಪಕ್ಷದ ನಾಯಕರ ಪ್ರತಿಪಾದನೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

ತಮ್ಮ ವೀಡಿಯೊ ವೈರಲ್ ಆದಾಗಿನಿಂದ ಭೂಗತರಾಗಿರುವ ಬೇಡಿ ರಾಮ್‌ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News