ಔಷಧಿಗಳ ಖರೀದಿಗೆ ಪೂರ್ಣ ಬಳಕೆಯಾದ ಅನುದಾನ: ಮಹಾ ಸರಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ
ಮುಂಬೈ : ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಬಜೆಟ್‌ನಲ್ಲಿ ನೀಡಲಾದ ಅನುದಾನವನ್ನು ಖರ್ಚು ಮಾಡದೆ ಇದ್ದುದಕ್ಕೆ ಬಾಂಬೆ ಹೈಕೋರ್ಟ್ ಶನಿವಾರ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮಹಾರಾಷ್ಟ್ರದ ನಾಂದೇಡ್ ಹಾಗೂ ಛತ್ರಪತಿ ಸಂಭಾಜಿ ನಗರ ಜಿಲ್ಲೆಗಳಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ 30ಕ್ಕೂ ಅಧಿಕ ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಗಳ ಆಲಿಕೆಯನ್ನು ನಡೆಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರೀಫ್ ಎಸ್.ಡಾಕ್ಟರ್ ಅವರನ್ನೊಳಗೊಂಡ ನ್ಯಾಯಪೀಠವು ಈ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿತು.
‘‘ಮಹಾರಾಷ್ಟ್ರ ಸರಕಾರವು ಒದಗಿಸಿರುವ ಮಾಹಿತಿಯ ಪ್ರಕಾರ ಔಷಧಿಗಳು ಹಾಗೂ ವೈದ್ಯಕೀಯ ಸಾಮಾಗ್ರಿಗಳ ಖರೀದಿಗೆ ಬಜೆಟ್‌ನಲ್ಲಿ ಮಂಜೂರು ಮಾಡಲಾದ ಸಮಗ್ರ ಅನುದಾನವನ್ನು ಖರ್ಚು ಮಾಡಿಲ್ಲ. ಇದರ ಹಿಂದಿರುವ ಕಾರಣವೇನು? ಮಂಜೂರು ಮಾಡಲಾದ ಹಣ ಖರ್ಚಾಗೆ ಬಿದ್ದಿರುವುದು ಹೊಸ ಪ್ರವೃತ್ತಿಯಂತೆ ಕಾಣುತ್ತಿದೆ. ಆದರೆ ಕೊನೆಗೆ ಇದರಿಂದ ಬಾಧಿತರಾಗುವವರು ಯಾರು ?’’ ಎಂದು ನ್ಯಾಯಪೀಠ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.
ರಾಜ್ಯ ಸರಕಾರದ ಪರವಾಗಿ ಅಡ್ವೋಕೇಟ್ ಬೀರೇಂದ್ರ ಕುಮಾರ್ ಸರಾಫ್ ಅವರು ವಾದ ಮಂಡಿಸುತ್ತಾ, ಮಹಾರಾಷ್ಟ್ರ ಔಷಧಿ ಖರೀದಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದ್ದು, ಔಧಿಗಳು ಹಾಗೂ ಉಪಕರಣಗಳ ಖರೀದಿಗೆ ಟೆಂಡರ್‌ಗಳನ್ನು ಕರೆಯುವ ಪ್ರಕ್ರಿಯೆ ಆರಂಭವಾಗಿದೆಯೆಂದರು.
ಔಷಧಿಗಳು ಹಾಗೂ ಸಲಕರಣೆಗಳ ಖರೀದಿಗೆ ಬಜೆಟ್‌ನಲ್ಲಿ ಮಂಜೂರಾದ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ರಾಜ್ಯ ಸರಕಾರವು ಮಾಹಿತಿ ನೀಡಿದೆ.