ಜಿ-20 ಶೃಂಗಸಭೆ: ದಿಲ್ಲಿಯಲ್ಲಿ 300ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆ ವ್ಯತ್ಯಯ

Update: 2023-09-03 10:27 GMT

ಸಾಂದರ್ಭಿಕ ಚಿತ್ರ.| Photo: PTI

ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯು ಜಿ-20 ಶೃಂಗಸಭೆಗೆ ಸಜ್ಜಾಗುತ್ತಿರುವ ಬೆನ್ನಿಗೇ, ಈ ಕಾರ್ಯಕ್ರಮದಿಂದಾಗಿ ವ್ಯತ್ಯಯವಾಗಲಿರುವ 300ಕ್ಕೂ ಹೆಚ್ಚು ರೈಲುಗಳ ಪಟ್ಟಿಯನ್ನು ಉತ್ತರ ರೈಲ್ವೆ ವಲಯ ಬಿಡುಗಡೆ ಮಾಡಿದೆ.

ಉತ್ತರ ರೈಲ್ವೆ ವಲಯವು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, ಸೆಪ್ಟೆಂಬರ್ 8ರಿಂದ 11ರ ನಡುವೆ ಈ ರೈಲುಗಳು ಒಂದೋ ರದ್ದಾಗಿವೆ ಇಲ್ಲವೆ ಇತರೆ ಮಾರ್ಗ ಅಥವಾ ನಿಲ್ದಾಣಗಳಿಗೆ ಬದಲಾಯಿಸಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ಬಿಡುಗಡೆ ಮಾಡಲಾಗಿರುವ ಮುನ್ನೆಚ್ಚರಿಕೆಯ ಪ್ರಕಾರ, ಅಮೃತಸರ ಜಂಕ್ಷನ್-ದಿಲ್ಲಿ ಎಕ್ಸ್ ಪ್ರೆಸ್ ಹಾಗೂ ಕಾನ್ಪುರ ಸೆಂಟ್ರಲ್-ಆನಂದ್ ವಿಹಾರ್ ಟರ್ಮಿನಲ್ ಎಕ್ಸ್ ಪ್ರೆಸ್ ರೈಲುಗಳ ಕಾರ್ಯಾಚರಣೆ ಸೇರಿದಂತೆ ಒಟ್ಟು 207 ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ.

ಇದಲ್ಲದೆ 15 ರೈಲುಗಳ ಟರ್ಮಿನಲ್ ಗಳನ್ನು ಬದಲಾಯಿಸಲಾಗಿದ್ದು, ಆರು ರೈಲು ಮಾರ್ಗಗಳ ದಿಕ್ಕನ್ನು ಮಾರ್ಪಡಿಸಲಾಗಿದೆ. ಪ್ರಯಾಣಿಕರಿಗೆ ಆಗಬಹುದಾದ ಅನಾನುಕೂಲವನ್ನು ತಗ್ಗಿಸಲು ಜಮ್ಮು ತವೈ-ಹೊಸದಿಲ್ಲಿ ರಾಜಧಾನಿ, ತೇಜಸ್ ರಾಜಧಾನಿ ಹಝ್ರತ್‍ ನಿಝಾಮುದ್ದೀನ್, ವಾರಾಣಸಿ-ಹೊಸದಿಲ್ಲಿ ತೇಜಸ್ ರಾಜಧಾನಿ ರೈಲುಗಳು ಸೇರಿದಂತೆ 70 ರೈಲುಗಳಿಗೆ ಹೆಚ್ಚುವರಿ ನಿಲುಗಡೆ ನಿಲ್ದಾಣಗಳನ್ನು ಒದಗಿಸಲಾಗಿದೆ ಎಂದು ಉತ್ತರ ರೈಲ್ವೆ ವಲಯ ತಿಳಿಸಿದೆ.

ಇದಲ್ಲದೆ, 36 ರೈಲುಗಳ ನಿರ್ಗಮನ ಹಾಗೂ ಅಂತ್ಯಗೊಳ್ಳುವ ನಿಲ್ದಾಣಗಳನ್ನು ಬದಲಾಯಿಸಲಾಗಿದೆ ಹಾಗೂ ಶೃಂಗಸಭೆಯ ಸಂದರ್ಭದಲ್ಲಿ ಮೂರು ರೈಲುಗಳಿಗೆ ದಿಲ್ಲಿಯ ಕಿಶನ್ ಗಂಜ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಸೆಪ್ಟೆಂಬರ್ 9ರಿಂದ 10ರವರೆಗೆ ಆಯೋಜನೆಗೊಂಡಿರುವ ರಾಷ್ಟ್ರಗಳು ಮತ್ತು ಸರ್ಕಾರಗಳ ಮುಖ್ಯಸ್ಥರ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಮತ್ತಷ್ಟು ಸಂಚಾರಿ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇದೆ.

ಹೊಸದಿಲ್ಲಿಯಲ್ಲಿ ಆಯೋಜನೆಗೊಂಡಿರುವ ಶೃಂಗಸಭೆಯಲ್ಲಿ ಎಲ್ಲ ಜಿ-20 ಸದಸ್ಯ ರಾಷ್ಟ್ರಗಳು ಮತ್ತು ಸರ್ಕಾರಗಳ ಮುಖ್ಯಸ್ಥರು (ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬಹುಶಃ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಹೊರತುಪಡಿಸಿ), ಸಭೆಗೆ ಆಮಂತ್ರಿತರಾಗಿರುವ ಪಾಲುದಾರ ದೇಶಗಳ ಮುಖ್ಯಸ್ಥರು ಹಾಗೂ ಜಾಗತಿಕ ಸಂಘಟನೆಗಳಾದ ವಿಶ್ವ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವ ಬ್ಯಾಂಕ್ ಹಾಗೂ ವಿಶ್ವ ವ್ಯಾಪಾರ ಸಂಘಟನೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News