ಗೌರಿ ಹತ್ಯೆ ಆರೋಪಿ ಪಕ್ಷಕ್ಕೆ ಸೇರ್ಪಡೆ | ಟೀಕೆ ಬಳಿಕ ನಿರ್ಧಾರ ತಡೆಹಿಡಿದ ಶಿಂಧೆ ನೇತೃತ್ವದ ಶಿವಸೇನೆ
ಹೊಸದಿಲ್ಲಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ನನ್ನು ಪಕ್ಷದ ಯಾವುದೇ ಹುದ್ದೆಗೆ ನೇಮಕಾತಿ ಮಾಡದಂತೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ತಡೆ ಹಿಡಿದಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ಜಲ್ನಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಶುಕ್ರವಾರ ಮರು ಸೇರ್ಪಡೆಯಾಗಿದ್ದ.
ಪಂಗರ್ಕರ್ ಪಕ್ಷಕ್ಕೆ ಸೇರ್ಪಡೆ ಅನೂರ್ಜಿತವಾಗಿದ್ದು, ಪಂಗರ್ಕರ್ ಗೆ ಪಕ್ಷದ ಯಾವುದೇ ಹುದ್ದೆಯನ್ನು ನೀಡಿದ್ದರೆ, ಆ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಶಿವಸೇನೆಯು ರವಿವಾರದ ಹೇಳಿಕೆಯಲ್ಲಿ ತಿಳಿಸಿದೆ. ಶಿಂಧೆ ನೇತೃತ್ವದ ಶಿವಸೇನೆಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರು ಶ್ರೀಕಾಂತ್ ಪಂಗರ್ಕರ್ ಸೇರ್ಪಡೆ ಬಗ್ಗೆ ಘೋಷಿಸಿದ್ದರು.
ಪಂಗರ್ಕರ್ ಒಬ್ಬ ಮಾಜಿ ಶಿವಸೈನಿಕ. ಪಕ್ಷಕ್ಕೆ ಮರಳಿರುವ ಪಂಗರ್ಕರ್ ನನ್ನು ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರದ ಉಸ್ತುವಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಖೋಟ್ಕರ್ ಸುದ್ದಿಗಾರರಿಗೆ ತಿಳಿಸಿದ್ದರು.
ವ್ಯಾಪಕ ಟೀಕೆಗಳ ನಂತರ ಶಿಂಧೆ ನೇತೃತ್ವದ ಶಿವಸೇನೆ ರವಿವಾರ ಜಲ್ನಾ ಜಿಲ್ಲೆಯಲ್ಲಿ ಪಂಗರ್ಕರ್ ಗೆ ಪಕ್ಷದ ಯಾವುದೇ ಹುದ್ದೆಯನ್ನು ನೀಡಿದ್ದರೆ, ಆ ನಿರ್ಧಾರಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಿದೆ. 2017ರ ಸೆ. 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕರ್ನಾಟಕ ಪೊಲೀಸರು ಪಂಗರ್ಕರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇದೇ ಸೆಪ್ಟೆಂಬರ್ 4ರಂದು ಆತ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಆತ ಬಿಡುಗಡೆಯಾಗಿದ್ದ.