ಬಾಲಕಿಗೆ ಲೈಂಗಿಕ ಶೋಷಣೆ ಪ್ರಕರಣ: ಮೀರತ್ ಬಿಜೆಪಿ ನಾಯಕನ ವಿರುದ್ಧ ಜಾಮೀನು ರಹಿತ ವಾರಂಟ್
ಮೀರತ್ (ಉ.ಪ್ರ): 17ರ ಹರೆಯದ ಬಾಲಕಿಯೋರ್ವಳಿಗೆ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಇಲ್ಲಿಯ ಪೊಕ್ಸೊ ನ್ಯಾಯಾಲಯವು ಸ್ಥಳೀಯ ಬಿಜೆಪಿ ನಾಯಕನ ವಿರುದ್ಧ ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿದೆ.
ಪೊಲೀಸರು ತಿಳಿಸಿರುವಂತೆ ವಕೀಲ ರಮೇಶಚಂದ ಗುಪ್ತಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯು ಗುಪ್ತಾ,ಅವರ ಸಂಬಂಧಿಗಳು,ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಗುಪ್ತಾ ಮಾರ್ವಾರಿ ಮತ್ತು ಉತ್ತರ ಪ್ರದೇಶ ಬಳಕೆದಾರ ಸಹಕಾರಿ ಒಕ್ಕೂಟದ ಅಧ್ಯಕ್ಷ ಸಂಜೀವ ಗೋಯಲ್ ಸಿಕ್ಕಾ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಪೊಕ್ಸೊ ನ್ಯಾಯಾಲಯವು ಮಾರ್ವಾರಿ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದರು.
ಇಬ್ಬರು ಬೇರೆ ಬೇರೆ ಬಾಲಕಿಯರನ್ನು ಗುಪ್ತಾ ಲೈಂಗಿಕವಾಗಿ ಶೋಷಿಸುತ್ತಿದ್ದ ಎರಡು ವೀಡಿಯೊಗಳು ಬಹಿರಂಗಗೊಂಡ ಬಳಿಕ 17ರ ಹರೆಯದ ಬಾಲಕಿ ಶಂಕಾಸ್ಪದ ಸನ್ನಿವೇಶಗಳಲ್ಲಿ ನಾಪತ್ತೆಯಾಗಿದ್ದಳು. ಆಕೆಯ ಸೋದರ ಮೇ 27ರಂದು ನಾಪತ್ತೆ ದೂರನ್ನು ದಾಖಲಿಸಿದ್ದ. ಜೂ.15ರಂದು ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಲಾಗಿತ್ತು.
ಮರುದಿನ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ಆಕೆ ಗುಪ್ತಾ,ಮಾರ್ವಾರಿ ಮತ್ತು ಸಿಕ್ಕಾ ವಿರುದ್ಧ ಲೈಂಗಿಕ ಶೋಷಣೆಯ ಆರೋಪಗಳನ್ನು ಮಾಡಿದ್ದಳು. ಬಳಿಕ ಪೊಲೀಸರು ಅತ್ಯಾಚಾರದ ಆರೋಪದಲ್ಲಿ ಗುಪ್ತಾ ಮತ್ತು ಮಾರ್ವಾರಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಗುಪ್ತಾನನ್ನು ಬಂಧಿಸಲಾಗಿದೆಯಾದರೂ ಮಾರ್ವಾರಿ ತಲೆ ಮರೆಸಿಕೊಂಡಿದ್ದಾನೆ.
ಸಿಕ್ಕಾ ವಿರುದ್ಧದ ಆರೋಪಗಳ ಕುರಿತು ಪ್ರಶ್ನೆಗೆ ಪೊಲೀಸರು,ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಲಾಗಿದ್ದು,ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು.