ಜಿಎಸ್‌ಟಿ ಪರಿಹಾರ ಸೆಸ್ ಕುರಿತು ಸಚಿವರ ಸಮಿತಿ ರಚನೆ
ಹೊಸದಿಲ್ಲಿ : ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ಸರಕುಗಳ ಮೇಲೆ ತೆರಿಗೆಯನ್ನು ನಿರ್ಧರಿಸಲು ಸಹಾಯಕ ವಿತ್ತಸಚಿವ ಪಂಕಜ ಚೌಧರಿಯವರ ಅಧ್ಯಕ್ಷತೆಯಲ್ಲಿ 10 ಸದಸ್ಯರ ಸಚಿವರ ಸಮಿತಿಯನ್ನು ಜಿಎಸ್‌ಟಿ ಮಂಡಳಿಯು ರಚಿಸಿದೆ. ಜಿಎಸ್‌ಟಿ ವ್ಯವಸ್ಥೆಯಡಿ ಈ ಸರಕುಗಳ ಮೇಲೆ ಪರಿಹಾರ ಸೆಸ್ 2026, ಮಾರ್ಚ್‌ಗೆ ಅಂತ್ಯಗೊಳ್ಳಲಿದೆ.
ಅಸ್ಸಾಂ, ಛತ್ತೀಸ್‌ಗಡ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ಸಚಿವರು ಸದಸ್ಯರಾಗಿರುವ ಸಮಿತಿಯು ಡಿಸೆಂಬರ್ 31ರೊಳಗೆ ತನ್ನ ವರದಿಯನ್ನು ಜಿಎಸ್‌ಟಿ ಮಂಡಳಿಗೆ ಸಲ್ಲಿಸಲಿದೆ.
ಜಿಎಸ್‌ಟಿ ವ್ಯವಸ್ಥೆಯಡಿ ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ಸರಕುಗಳ ಶೇ.28 ತೆರಿಗೆ ದರದ ಮೇಲೆ ವಿವಿಧ ದರಗಳಲ್ಲಿ ಪರಿಹಾರ ಸೆಸ್ ಅನ್ನು ವಿಧಿಸಲಾಗುತ್ತಿದೆ. ಜಿಎಸ್‌ಟಿ ಜಾರಿಗೊಂಡ ಐದು ವರ್ಷಗಳು ಅಥವಾ ಜೂನ್ 2022ರವರೆಗೆ ಜಾರಿಯಲ್ಲಿರುವಂತೆ ಆರಂಭದಲ್ಲಿ ರೂಪಿಸಲಾಗಿದ್ದ ಪರಿಹಾರ ಸೆಸ್‌ನ್ನು ಜಿಎಸ್‌ಟಿ ಅನುಷ್ಠಾನದ ಬಳಿಕ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ತುಂಬಿಕೊಡಲು ಬಳಸಲಾಗುತ್ತದೆ.
ಕೋವಿಡ್ ವರ್ಷಗಳಲ್ಲಿ ರಾಜ್ಯಗಳ ಆದಾಯ ನಷ್ಟವನ್ನು ಸರಿದೂಗಿಸಲು 2021 ಮತ್ತು 2022ನೇ ಹಣಕಾಸು ವರ್ಷಗಳಲ್ಲಿ ಪಡೆಯಲಾದ 2.69 ಲಕ್ಷ ಕೋಟಿ ರೂ.ಗಳ ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಲು ಜಿಎಸ್‌ಟಿ ಮಂಡಳಿಯು 2022ರಲ್ಲಿ ಪರಿಹಾರ ಸೆಸ್ ಹೇರಿಕೆಯನ್ನು ಮಾರ್ಚ್ 2026ರವರೆಗೆ ವಿಸ್ತರಿಸಿತ್ತು. ಇದೀಗ ಈ ಅವಧಿ ಅಂತ್ಯಗೊಳ್ಳಲು ಒಂದೂವರೆ ವರ್ಷಗಳು ಬಾಕಿಯಿರುವಂತೆ ಮಂಡಳಿಯು ಸೆ.9ರಂದು ನಡೆಸಿದ್ದ ತನ್ನ 54ನೇ ಸಭೆಯಲ್ಲಿ ಸೆಸ್ ಅನ್ನು ಮುಂದುವರಿಸಬೇಕೇ ಅತವಾ ಹೆಚ್ಚುವರಿ ತೆರಿಗೆ ಯನ್ನು ವಿಧಿಸಬೇಕೇ ಎನ್ನುವುದನ್ನು ನಿರ್ಧರಿಸಲು ಸಚಿವರ ಸಮಿತಿಯನ್ನು ರಚಿಸಿದೆ ಎಂದು ಜಿಎಸ್‌ಟಿ ಮಂಡಳಿಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.