ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್ ವ್ಯಕ್ತಿಯ ಬಂಧನ | ಆರೋಪಿಗೆ ಬಿಜೆಪಿಗೆ ಸಂಪರ್ಕ: ಕಾಂಗ್ರೆಸ್ ಆರೋಪ

Update: 2024-07-23 11:02 GMT

Image Credit: X/@zoo_bear

ಸೂರತ್: ಸೂರತ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಆರೋಪಿ ವಿಕಾಸ್ ಅಹಿರ್ ನಿಗೆ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿ ಆರ್ ಪಾಟೀಲ್ ಸೇರಿದಂತೆ ಆಡಳಿತ ಪಕ್ಷದ ಹಲವು ಪ್ರಮುಖ ನಾಯಕರಿಗೆ ನಿಕಟವಾಗಿದ್ದಾರೆ ಎಂದು ಆರೋಪಿಸಿ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಏರ್ಪಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಡ್ರಗ್ ಪೆಡ್ಲರ್‌ನ ಬಂಧನವು ಪಕ್ಷದ ನೇತೃತ್ವದ ಸರ್ಕಾರದ ಅಡಿಯಲ್ಲಿ ಪೊಲೀಸರು ಡ್ರಗ್ಸ್ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ತಪ್ಪಿತಸ್ಥರ ವಿರುದ್ಧ ಅವರ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ನಿರ್ದಿಷ್ಟ ಸುಳಿವು ಆಧರಿಸಿ, ಸೂರತ್ ಪೊಲೀಸರು ಸೋಮವಾರ ನಗರದ ಸಲಾಬತ್‌ಪುರ ಪ್ರದೇಶದ ಹೋಟೆಲ್‌ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ ಅವರಿಂದ 35.49 ಲಕ್ಷ ರೂಪಾಯಿ ಮೌಲ್ಯದ 910 ಗ್ರಾಂ ಮೆಫೆಡ್ರೋನ್ ಡ್ರಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜಸ್ಥಾನದ ಉದಯಪುರ ನಿವಾಸಿ ಚೇತನ್ ಶಾಹು ಮತ್ತು ಸೂರತ್‌ನ ಅನಿಷ್ ಖಾನ್ ಪಠಾಣ್ ಮತ್ತು ವಿಕಾಸ್ ಅಹಿರ್ ಎಂದು ಗುರುತಿಸಲಾಗಿದೆ. ಮಾದಕ ವ್ಯಸನಿಗಳಿಗೆ ಪಾನ್ ಮತ್ತು ಐಸ್‌ಕ್ರೀಂ ಪಾರ್ಲರ್‌ಗಳ ಮೂಲಕ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗೆಹ್ಲೋಟ್ ಹೇಳಿದರು.

ವಿಕಾಸ್ ಅಹಿರ್ ಗೆ ರೌಡಿ ಶೀಟರ್ ಹಿನ್ನೆಲೆಯಿದೆ ಎಂದು ತಿಳಿದುಬಂದಿದೆ. ಆತ ತನ್ನ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳೊಂದಿಗೆ ನಿಕಟವಾಗಿದ್ದ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಅಹಿರ್ ಮೇಲೆ ಈಗಾಗಲೇ ಅಪಹರಣ, ಗಲಭೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಆರು ಎಫ್‌ಐಆರ್‌ಗಳಿವೆ ಎಂದು ಸೂರತ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಹಿರ್ ಬಂಧನದ ನಂತರ, ಸೂರತ್‌ನ ಅಸ್ಲಾಂ ಸೈಕಲ್‌ವಾಲಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಾಂಘವಿ, ಪಾಟೀಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಅಹಿರ್ ಇರುವ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಹಿರ್ ಬಹಳ ಹಿಂದಿನಿಂದಲೂ ಯೋಗಿಯ ಹಿಂದೂ ಯುವ ವಾಹಿನಿಯ ಗುಜರಾತ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ, ಗುಜರಾತ್ ಕಾಂಗ್ರೆಸ್ ಅಹಿರ್ ಬಿಜೆಪಿಯ ಸದಸ್ಯ ಎಂದು ಆರೋಪಿಸಿದೆ. ಗಾಂಧಿನಗರದಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಾದ 'ಕಮಲಂ'ನಲ್ಲಿ ಕುಳಿತಿರುವ ಬಿಜೆಪಿಯ ಹಿರಿಯ ನಾಯಕರಿಗೆ ಅವರು ಕಮಿಷನ್ ನೀಡುತ್ತಿದ್ದರೆ? ಎಂದು ಪ್ರಶ್ನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿಯ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ ಅವರು ಅಹಿರ್ ಬಂಧನವು ಬಿಜೆಪಿ ಸರ್ಕಾರ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ. "ಒಬ್ಬ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾದರೆ ಆತ ಅಪರಾಧಿಯೇ. ಆತನಿಗೆ ರಾಜಕೀಯ ನಂಟಿದ್ದರೂ, ನಾವು ರಕ್ಷಿಸಲು ಪ್ರಯತ್ನಿಸಲಿಲ್ಲ. ಈ ರೀತಿಯ ನಡೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ ಸುಮಾರು 3,500 ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

"ಈ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ, ನಾವು ಎಲ್ಲರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ, ಒಬ್ಬ ವ್ಯಕ್ತಿ ಅಪರಾಧದಲ್ಲಿ ಭಾಗಿಯಾಗಿದ್ದರೆ, ಕ್ರಮ ತೆಗೆದುಕೊಳ್ಳುವ ಮೊದಲು ನಾವು ಅವರ ರಾಜಕೀಯ ಸಂಬಂಧವನ್ನು ನೋಡುವುದಿಲ್ಲ ಎಂಬುದನ್ನು ಈ ಪ್ರಕರಣವು ಸಾಬೀತುಪಡಿಸುತ್ತದೆ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News