ಗುಜರಾತ್ ಮಳೆ : ಸುಮಾರು 12,000 ಮಂದಿ ಸ್ಥಳಾಂತರ
ಸೂರತ್ (ಗುಜರಾತ್): ರವಿವಾರದಿಂದ ಗುಜರಾತ್ ನಲ್ಲಿ ಭಾರಿ ಮಳೆಯಾಗುತ್ತಿದ್ದು, ವಡೋದರ, ಭರೂಚ್, ನರ್ಮದಾ, ದಾಹೋಡ್, ಪಂಚ್ ಮಹಲ್, ಆನಂದ್ ಹಾಗೂ ಗಾಂಧಿನಗರ ಜಿಲ್ಲೆಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ 11,900 ಮಂದಿಯನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 270 ಮಂದಿಯನ್ನು ರಕ್ಷಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಮಳೆಯ ತೀವ್ರತೆಗೆ ಮುರಿದು ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ರಸ್ತೆಗಳನ್ನು ಸಂಚಾರ ಮುಕ್ತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ದಾರ್ ಸರೋವರ ಅಣೆಕಟ್ಟೆಯಿಂದ ನೀರು ಹೊರಬಿಟ್ಟಿರುವುದರಿಂದ ಕಳೆದ ಎರಡು ದಿನಗಳಲ್ಲಿ ಭರೂಚ್ ಜಿಲ್ಲೆಯ ನರ್ಮದಾ ನದಿಯ ನೀರಿನ ಮಟ್ಟ 40 ಅಡಿಗಳಷ್ಟು ಏರಿಕೆಯಾಗಿದ್ದು, ನದಿ ತೀರದಲ್ಲಿ ವಾಸಿಸುತ್ತಿರುವ 6,000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರದ ಬೆಳಗ್ಗೆಯಿಂದ ನೀರಿನ ಮಟ್ಟವು ನಿಧಾನವಾಗಿ ತಗ್ಗುತ್ತಿದ್ದರೂ, ಭರೂಚ್ ನಗರದ ಹಲವಾರು ಪ್ರದೇಶಗಳು ಮತ್ತು ತಾಲ್ಲೂಕುಗಳು, ಅಂಕಲೇಶ್ವರದಲ್ಲಿನ ಹಲವಾರು ಜನವಸತಿ ಪ್ರದೇಶಗಳು ಹಾಗೂ ಗ್ರಾಮಗಳಲ್ಲಿ ಈಗಲೂ ಮೊಣಕಾಲು ಮಟ್ಟದ ನೀರು ನಿಂತಿದೆ.
ನರ್ಮದಾ ನದಿಯ ಹಾಲಿ ನೀರಿನ ಮಟ್ಟವು 37.72 ಅಡಿಯಷ್ಟಿದ್ದು, ಅಂಕೇಶ್ವರದಿಂದ ಭರೂಚ್ ಗೆ ಸಂಪರ್ಕ ಕಲ್ಪಿಸುವ ಗೋಲ್ಡನ್ ಬ್ರಿಜ್ ಬಳಿ ಅಪಾಯಕಾರಿ ಮಟ್ಟವಾದ 28 ಅಡಿಗಿಂತ 10 ಅಡಿ ಹೆಚ್ಚೇ ನೀರಿನ ಮಟ್ಟ ಇದೆ ಎಂದು ಭರೂಚ್ ಜಿಲ್ಲಾ ತುರ್ತು ಪರಿಸ್ಥಿತಿ ಪ್ರತಿಸ್ಪಂದನಾ ಕೇಂದ್ರವು ತಿಳಿಸಿದೆ.
ರವಿವಾರ ಮೇಲ್ಭಾಗದಲ್ಲಿರುವ ಸರ್ದಾರ್ ಸರೋವರ್ ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟಿದ್ದರಿಂದ ಸೇತುವೆಯ ಬಳಿಯ ನೀರಿನ ಮಟ್ಟವು 40 ಅಡಿಗಿಂತ ಅಧಿಕವಿತ್ತು.