ಮುಸ್ಲಿಮೇತರರಿಗೆ ಧಾರ್ಮಿಕ ಶಿಕ್ಷಣ ಬೋಧಿಸುವ ಮದರಸಗಳಿಗೆ ಅನುದಾನ ಸ್ಥಗಿತ : ಮಧ್ಯಪ್ರದೇಶ ಸಿಎಂ

Update: 2024-08-21 16:29 GMT

ಮೋಹನ್ ಯಾದವ್ | PTI 

ಭೋಪಾಲ : ಮುಸ್ಲಿಮೇತರರಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವ ಅಥವಾ ಅವರ ಧರ್ಮಕ್ಕೆ ವಿರುದ್ಧವಾದ ಧಾರ್ಮಿಕ ಆಚರಣೆಗಳಿಗೆ ಹಾಜರಾಗುವಂತೆ ಬಲವಂತಗೊಳಿಸುವ ಮದರಸಗಳಿಗೆ ಸರಕಾರಿ ಅನುದಾನಗಳನ್ನು ನಿಲ್ಲಿಸಲಾಗುವುದು ಮತ್ತು ಅಂತಹ ಮದರಸಗಳ ವಿರುದ್ಧ ರಾಜ್ಯ ಸರಕಾರವು ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.

ಆ.16ರಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು,ನಿರ್ದಿಷ್ಟ ಧಾರ್ಮಿಕ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ಇತರ ಧರ್ಮಗಳ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವುದನ್ನು ನಿಷೇಧಿಸಿ ನೋಟಿಸನ್ನು ಹೊರಡಿಸಿತ್ತು.

ನಿಷೇಧ ಕ್ರಮವು ಸಂವಿಧಾನದ ವಿಧಿ 28(3)ಕ್ಕೆ ಅನುಗುಣವಾಗಿದೆ ಎಂದು ಯಾದವ್ ತಿಳಿಸಿದರು.‘ಸರಕಾರದಿಂದ ಮಾನ್ಯತೆಯನ್ನು ಹೊಂದಿರುವ ಅಥವಾ ಸರಕಾರಿ ಅನುದಾನವನ್ನು ಪಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವ್ಯಕ್ತಿಯು ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗುವ ಯಾವುದೇ ಧಾರ್ಮಿಕ ಬೋಧನೆಗಳಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿಲ್ಲ ’ಎಂದು ಈ ವಿಧಿಯು ಹೇಳುತ್ತದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರು ಸರಕಾರದ ಆದೇಶವನ್ನು ಆಕ್ಷೇಪಿಸಿದರು. ‘ನಮ್ಮ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಸಮಾಜ ಸುಧಾರಕ ರಾಮಮೋಹನ್ ರಾಯ್, ಲೇಖಕ ಮುನ್ಶಿ ಪ್ರೇಮಚಂದ್ ಇವರೆಲ್ಲರೂ ಮದರಸಗಳಲ್ಲಿಯೇ ಶಿಕ್ಷಣ ಪಡೆದಿದ್ದರು. ಅವರು (ಬಿಜೆಪಿ ಸರಕಾರ) ಮದರಸಗಳಿಗೆ ಏಕೆ ಹೆದರುತ್ತಿದ್ದಾರೆ? ಅವರು ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳನ್ನು ಮತ್ತು ಶಿಕ್ಷಣ ವ್ಯವಸ್ಥೆಗಳನ್ನೇಕೆ ಗುರಿಯಾಗಿಸಿಕೊಂಡಿದ್ದಾರೆ?’ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News