ಹರಿಯಾಣ ವಿಧಾನಸಭೆ ಚುನಾವಣೆ 2024 | ಫರಿದಾಬಾದ್‌ನಿಂದ ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿ ಅಭ್ಯರ್ಥಿ
ಫರಿದಾಬಾದ್ : ನುಹ್ ಹಿಂಸಾಚಾರ ಪ್ರಕರಣದ ಆರೋಪಿ ಸ್ವಘೋಷಿತ ಗೋರಕ್ಷಕ ಬಿಟ್ಟು ಬಜರಂಗಿ ಅಲಿಯಾಸ್ ರಾಜ್‌ಕುಮಾರ್ ಪಾಂಚಾಲ್ ಫರಿದಾಬಾದ್‌ನ ಎನ್‌ಐಟಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾನೆ.
ಅಕ್ಟೋಬರ್ 5 ರಂದು ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಧಿಕೃತ ಹೇಳಿಕೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿ ವಿಕ್ರಮ್ ಸಿಂಗ್, ಬಿಟ್ಟು ಬಜರಂಗಿಯು ಎನ್‌ಐಟಿ ಫರಿದಾಬಾದ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದನ್ನು ಖಚಿತಪಡಿಸಿದ್ದಾರೆ.
ಗೌ ರಕ್ಷಾ ಬಜರಂಗದಳವನ್ನು ಸ್ಥಾಪಿಸಿದ ಬಜರಂಗಿ, ಸದಾ ವಿವಾದಗಳಿಗೆ ಕುಖ್ಯಾತ.
ಕಳೆದ ವರ್ಷ ಜುಲೈನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ಪ್ರಾರಂಭವಾದ ನುಹ್ ಹಿಂಸಾಚಾರದ ಪ್ರಕರಣದಲ್ಲಿ ಬಜರಂಗಿ ಆರೋಪಿಯಾಗಿದ್ದಾನೆ.
ಕಳೆದ ವರ್ಷ ಜುಲೈ 31 ರಂದು ನುಹ್‌ನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದರು. ಅನೇಕರು ಗಾಯಗೊಂಡಿದ್ದರು. ಹಿಂಸಾಚಾರವು ರಾಜ್ಯದ ಪ್ರದೇಶಗಳಿಗೆ ಹರಡಿತ್ತು. ಗುರುಗ್ರಾಮದಲ್ಲಿ ಮಸೀದಿಯ ಇಮಾಮ್ ಒಬ್ಬರನ್ನು ಕೊಲ್ಲಲಾಗಿತ್ತು.
ಈ ವರ್ಷದ ಜುಲೈನಲ್ಲಿ ಫರಿದಾಬಾದ್‌ನಲ್ಲಿ ಬಜರಂಗಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು.