ನೀಟ್-ಯುಜಿ| 6 ವಿದ್ಯಾರ್ಥಿಗಳು 720 ಅಂಕ ಗಳಿಸಿದ್ದ ಹರ್ಯಾಣ ಪರೀಕ್ಷಾ ಕೇಂದ್ರದಲ್ಲಿ ಮರು ಪರೀಕ್ಷೆ ಬಳಿಕ 682 ಅಂಕ ಗಳಿಸಿದವನೆ ಈ ಬಾರಿಯ ಟಾಪರ್!
ಹೊಸದಿಲ್ಲಿ: ಪರಿಷ್ಕೃತ ನೀಟ್-ಯುಜಿ ಪರೀಕ್ಷೆಯಲ್ಲಿ ವಿವಾದಾತ್ಮಕ ಹರ್ಯಾಣ ಪರೀಕ್ಷಾ ಕೇಂದ್ರದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದಿರುವ ಯಾವ ಅಭ್ಯರ್ಥಿಯೂ 682ಕ್ಕಿಂತ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿಲ್ಲ.
ಮೇ 5ರಂದು ಪ್ರಕಟಗೊಂಡಿದ್ದ ನೀಟ್-ಯುಜಿ ಪರೀಕ್ಷಾ ಫಲಿತಾಂಶದಲ್ಲಿ ಹರ್ಯಾಣದ ಝಜ್ಜರ್‌ನ ಹರ್ದಯಾಳ್ ಸಾರ್ವಜನಿಕ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಆರು ಅಭ್ಯರ್ಥಿಗಳು 720ಕ್ಕೆ 720 ಅಂಕ ಗಳಿಸುವ ಮೂಲಕ ಈ ಪರೀಕ್ಷಾ ಕೇಂದ್ರವು ಸಾರ್ವಜನಿಕರ ದಿಢೀರ್ ಗಮನ ಸೆಳೆದಿತ್ತು. ಇದರೊಂದಿಗೆ ಪರೀಕ್ಷಾ ಫಲಿತಾಂಶದ ಕುರಿತು ಅನುಮಾನಗಳೂ ಭುಗಿಲೆದ್ದಿದ್ದವು. ಈ ಫಲಿತಾಂಶದ ವಿರುದ್ಧ ಸಣ್ಣಗೆ ಪ್ರಾರಂಭಗೊಂಡ ಪ್ರತಿರೋಧವು ಕೆಲವೇ ದಿನಗಳಲ್ಲಿ ಬೃಹತ್ ಪ್ರತಿಭಟನೆಯ ಸ್ವರೂಪ ಪಡೆದು, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಬಯಲಿಗೆಳೆದಿತ್ತು.
ಈ ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರಿಂದ, ವಿವಾದಕ್ಕೀಡಾದ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿದ್ದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು, ಸದರಿ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಿತ್ತು.
ಪ್ರಕಟಗೊಂಡಿರುವ ಮರು ಪರೀಕ್ಷೆಯ ಫಲಿತಾಂಶದಲ್ಲಿ ಹರ್ದಯಾಳ್ ಸಾರ್ವಜನಿಕ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಪೈಕಿ ಕೇವಲ 13 ಮಂದಿ ಮಾತ್ರ 600 ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬುದು ರವಿವಾರ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ನಗರವಾರು ಫಲಿತಾಂಶ ವಿವರಗಳಿಂದ ಬಯಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೇ 5ರಂದು ಸುಮಾರು 4,750 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ನೀಟ್-ಯುಜಿ ಪರೀಕ್ಷೆಯಲ್ಲಿ ಅಂದಾಜು 24 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.