ಹಾಥ್ರಸ್ ಕಾಲ್ತುಳಿತ ಪ್ರಕರಣ: ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದ ʼಭೋಲೆ ಬಾಬಾʼ

Update: 2024-07-06 06:02 GMT

PC : PTI

ಹಾಥ್ರಸ್: ನಾನು ಹಾಥ್ರಸ್ ಕಾಲ್ತುಳಿತ ಘಟನೆಯಿಂದ ಖಿನ್ನನಾಗಿದ್ದೇನೆ. ಈ ಘಟನೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳ ಸದಸ್ಯರು ನ್ಯಾಯಾಂಗದಲ್ಲಿ ವಿಶ್ವಾಸವಿಡಬೇಕು ಎಂದು ಭೋಲೆ ಬಾಬಾ ಎಂದು ಕರೆಯಲಾಗುವ ಸೂರಜ್ ಪಾಲ್ ಸಿಂಗ್ ಎಂಬ ಮೂಲ ಹೆಸರಿನ ಸ್ವಘೋಷಿತ ದೇವಮಾನವ ವಿಡಿಯೊ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

“ನಾನು ಈ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನಮಗೆ ನೀಡಲಿ. ದಯವಿಟ್ಟು ಸರಕಾರ ಹಾಗೂ ಆಡಳಿತದ ಮೇಲೆ ವಿಶ್ವಾಸವಿಡಿ. ಈ ದುರ್ಘಟನೆಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ನಾನು ನನ್ನ ವಕೀಲ ಎ.ಪಿ.ಸಿಂಗ್ ಮೂಲಕ, ಮೃತಪಟ್ಟವರ ಕುಟುಂಬದ ಸದಸ್ಯರೊಂದಿಗೆ ಇರುವಂತೆ ಹಾಗೂ ಗಾಯಾಳುಗಳಿಗೆ ಜೀವನ ಪೂರ್ತಿ ನೆರವು ನೀಡುವಂತೆ ಸಮಿತಿಯ ಸದಸ್ಯರಿಗೆ ಮನವಿ ಮಾಡಿದ್ದೇನೆ” ಎಂದು ವಿಡಿಯೊ ಸಂದೇಶದಲ್ಲಿ ಭೋಲೆ ಬಾಬಾ ಹೇಳಿಕೊಂಡಿದ್ದಾರೆ.

ಈ ನಡುವೆ, 121 ಜನರನ್ನು ಬಲಿ ಪಡೆದ ಹಾಥ್ರಸ್ ಕಾಲ್ತುಳಿತ ಘಟನೆಯ ಪ್ರಮುಖ ಆರೋಪಿ ದೇವ್ ಪ್ರಕಾಶ್ ಮಧುಕರ್ ಶುಕ್ರವಾರ ರಾತ್ರಿ ಪೊಲೀಸರೆದುರು ಶರಣಾಗಿದ್ದಾನೆ. ಇದರ ಬೆನ್ನಿಗೇ, ಆತನನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಗೆ ಶರಣಾಗಿರುವ ದೇವ್ ಪ್ರಕಾಶ್ ಮಧುಕರ್ ನನ್ನು ಇಂದು (ಶನಿವಾರ) ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇದಕ್ಕೂ ಮುನ್ನ, ದೇವ್ ಪ್ರಕಾಶ್ ಮಧುಕರ್ ಕುರಿತು ಮಾಹಿತಿ ನೀಡಿದವರಿಗೆ ರೂ. ಒಂದು ಲಕ್ಷ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ಪ್ರಕಟಿಸಿದ್ದರು.

ಜುಲೈ 3ರಂದು ಈ ಕಾಲ್ತುಳಿತ ಪ್ರಕರಣದ ಹಿಂದೆಯೇನಾದರೂ ಪಿತೂರಿ ಸಾಧ್ಯತೆ ಇದೆಯೆ ಎಂಬುದನ್ನು ಪತ್ತೆ ಹಚ್ಚಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ಉತ್ತರ ಪ್ರದೇಶ ಸರಕಾರ ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News