ಅದಾನಿಗೆ ಭಾರತದಲ್ಲಿ ‘ಸಹಿ ಹಾಕಿದ ಖಾಲಿ ಚೆಕ್’ ನೀಡಲಾಗಿದೆ : ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್ ಅದಾನಿಗೆ ಭಾರತದಲ್ಲಿ ‘‘ಸಹಿ ಹಾಕಿದ ಖಾಲಿ ಚೆಕ್’’ ನೀಡಲಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ ಹಾಗೂ ಈ ಉದ್ಯಮ ಸಮೂಹ ನಡೆಸಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನಿಖೆಗೇಕೆ ಆದೇಶ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅದಾನಿ ಗುಂಪು ನೂರಾರು ಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲನ್ನು ಮಾರುಕಟ್ಟೆ ದರಕ್ಕಿಂತ ತುಂಬಾ ಹೆಚ್ಚಿನ ಬೆಲೆಗೆ ಆಮದು ಮಾಡಿತು ಹಾಗೂ ಅದರಿಂದ ಉತ್ಪಾದಿಸಲಾದ ವಿದ್ಯುತ್‌ಗೆ ಗ್ರಾಹಕರಿಂದ ಅಧಿಕ ದರ ವಸೂಲಿ ಮಾಡಿತು ಎಂಬುದಾಗಿ ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಯು ಆರೋಪಿಸಿದ ಆರು ದಿನಗಳ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
‘‘ಇದಕ್ಕೂ ಮೊದಲು, 20,000 ಕೋಟಿ ರೂ. ಅವ್ಯವಹಾರದ ಬಗ್ಗೆ ನಾವು ಮಾತನಾಡಿದ್ದೆವು’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಹೇಳಿದರು. ‘‘ಈಗ, ಈ ಸಂಖ್ಯೆ ಸರಿಯಲ್ಲ ಎನ್ನುವುದು ಗೊತ್ತಾಗಿದೆ. ಈ ಸಂಖ್ಯೆಗೆ ಇನ್ನೂ 12,000 ಕೋಟಿ ರೂ. ಸೇರಿಸಲಾಗಿದೆ. ಈಗ ಅದಾನಿ ಗುಂಪಿನ ಅವ್ಯವಹಾರದ ಒಟ್ಟು ಮೊತ್ತ 32,000 ರೂ. ಆಗಿದೆ’’ ಎಂದು ಅವರು ಆರೋಪಿಸಿದರು.
ಮಾರ್ಚ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಅದಾನಿ ಗುಂಪಿನ ಶೆಲ್ (ನಕಲಿ) ಕಂಪೆನಿಗಳಿಗೆ 20,000 ಕೋಟಿ ರೂ. ದಿಢೀರನೆ ಸೇರ್ಪಡೆಯಾಗಿದೆ ಎಂದು ಆರೋಪಿಸಿದ್ದರು.
‘‘ಇತರ ಹಲವು ದೇಶಗಳು ಅದಾನಿ ಅವ್ಯವಹಾರಗಳ ಬಗ್ಗೆ ತನಿಖೆ ಮಾಡುತ್ತಿವೆ, ಆದರೆ ಭಾರತವು ಅದಾನಿಗೆ ಖಾಲಿ ಚೆಕ್ ಕೊಟ್ಟಿ ಬಿಟ್ಟಿದೆ’’ ಎಂದು ಗಾಂಧಿ ಆರೋಪಿಸಿದರು. ‘‘ವಿದ್ಯುತ್, ಬಂದರು, ವಿಮಾನ ನಿಲ್ದಾಣ- ಹೀಗೆ ಅವರಿಗೆ ಏನು ಬೇಕೋ ಅವುಗಳನ್ನೆಲ್ಲಾ ಪಡೆದುಕೊಳ್ಳುತ್ತಾರೆ’’ ಎಂದರು.
ಕೈಗಾರಿಕಾ ಸಮೂಹವೊಂದು ಪ್ರಧಾನಿಯ ರಕ್ಷಣೆಯಿಲ್ಲದೆ ಇಂಥ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ವಯನಾಡ್ ಸಂಸದ ಅಭಿಪ್ರಾಯಪಟ್ಟರು. ‘‘ಈ ಎಲ್ಲಾ ಹಗರಣಗಳ ಬಗ್ಗೆ ಪ್ರಧಾನಿ ಯಾಕೆ ಮೌನ ವಹಿಸಿದ್ದಾರೆ? ಈ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವ ಮೂಲಕ ನೀವು ಪರಿಶುದ್ಧರಾಗಿ ಹೊರಬನ್ನಿ, ನಿಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಿ. ಇದು ನಿಮ್ಮ ಒಳ್ಳೆಯದಕ್ಕಾಗಿಯೇ ನಾನು ನೀಡುತ್ತಿರುವ ಸಲಹೆ’’ ಎಂದು ಗಾಂಧಿ ನುಡಿದರು.
ಅದಾನಿ ಹಗರಣಗಳನ್ನು ಮಾಧ್ಯಮಗಳೇ ಮುಚ್ಚಿ ಹಾಕುತ್ತಿವೆ
ಅದಾನಿ ಗುಂಪಿನ ವಿರುದ್ಧದ ಆರೋಪಗಳನ್ನು ಮಾಧ್ಯಮಗಳು ಯಾಕೆ ವರದಿ ಮಾಡುತ್ತಿಲ್ಲ ಎಂಬುದಾಗಿಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದರು.
‘‘ಅದಾನಿ ಹಗರಣಗಳ ಬಗ್ಗೆ ಲಂಡನ್‌ನ ‘ಫೈನಾನ್ಶಿಯಲ್ ಟೈಮ್ಸ್’ನಲ್ಲಿ ವರದಿ ಬರುತ್ತದೆ, ಆದರೆ ಭಾರತೀಯ ಮಾಧ್ಯಮಗಳು ಒಂದೇ ಒಂದು ಪ್ರಶ್ನೆಯನ್ನು ಕೇಳುವುದಿಲ್ಲ’’ ಎಂದು ರಾಹುಲ್ ಹೇಳಿದರು.
‘‘ಫೈನಾನ್ಶಿಯಲ್ ಟೈಮ್ಸ್‌ನ ವರದಿಯು ಯಾವುದೇ ಸರಕಾರವನ್ನು ಉರುಳಿಸುವಷ್ಟು ಶಕ್ತಿಶಾಲಿಯಾಗಿದೆ. ಇದು ಭಾರತದ ಪ್ರಧಾನಿಯಿಂದ ನಿರಂತರವಾಗಿ ರಕ್ಷಣೆ ಪಡೆಯುತ್ತಿರುವ ವ್ಯಕ್ತಿಯೊಬ್ಬ ನಡೆಸಿರುವ ನೇರ ಕಳ್ಳತನವಾಗಿದೆ’’ ಎಂದು ಅವರು ಆರೋಪಿಸಿದರು.
ಅದಾನಿ ಗುಂಪಿನ ದಾಖಲೆಗಳು ಸೆಬಿಯಲ್ಲಿಲ್ಲ!
‘‘ಅದಾನಿ ಗುಂಪಿಗೆ ಸಂಬಂಧಿಸಿದ ದಾಖಲೆಗಳು ನಮಗೆ ಸಿಗುತ್ತಿಲ್ಲ ಎಂದು ಸೆಬಿ (ಭಾರತೀಯ ಶೇರು ವಿನಿಮಯ ಮಂಡಳಿ) ಸರಕಾರಕ್ಕೆ ಹೇಳಿದೆ. ಅದಾನಿ ಗುಂಪನ್ನು ಸರಕಾರದ ಅತ್ಯುನ್ನತ ಮಟ್ಟದಲ್ಲಿರುವವರು ರಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ’’ ಎಂದು ರಾಹುಲ್ ಗಾಂಧಿ ಹೇಳಿದರು.
ಹನ್ನೆರಡು ವಿದೇಶಿ ಹೂಡಿಕೆದಾರರು ಸೇರಿದಂತೆ 13 ವಿದೇಶಿ ಹೂಡಿಕೆ ಸಂಸ್ಥೆಗಳ ಬಗ್ಗೆ ತಾನು ನಡೆಸಿದ ತನಿಖೆಯ ಬಗ್ಗೆ ಸೆಬಿ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿತ್ತು. ತಾನು ತನಿಖೆ ನಡೆಸುತ್ತಿರುವ ಹೆಚ್ಚಿನ ಸಂಸ್ಥೆಗಳು ತೆರಿಗೆ ಮುಕ್ತ ದೇಶಗಳ ವ್ಯಾಪ್ತಿಯಲ್ಲಿ ಬರುವುದರಿಂದ ಅವುಗಳಲ್ಲಿ ಹೂಡಿಕೆ ಮಾಡಿರುವವರನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ ಎಂದು ಅದು ಹೇಳಿತ್ತು.