ಉಷ್ಣಾಘಾತ: ದೆಹಲಿಯಲ್ಲಿ 76, ಉತ್ತರ ಪ್ರದೇಶದಲ್ಲಿ 51 ಮಂದಿ ಮೃತ್ಯು
ಹೊಸದಿಲ್ಲಿ: ಈ ಬೇಸಿಗೆಯಲ್ಲಿ ದೇಶಾದ್ಯಂತ 143 ಮಂದಿ ಉಷ್ಣಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ವಿವಿಧ ರಾಜ್ಯಗಳಿಂದ ಜೂನ್ 20ರವರೆಗೆ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಸಾವಿನ ಸಂಖ್ಯೆಯನ್ನು ದೃಢಪಡಿಸಲಾಗಿದ್ದು, ದೆಹಲಿಯಲ್ಲಿ ಅತ್ಯಧಿಕ ಅಂದರೆ 76 ಮಂದಿ ಹಾಗೂ ಉತ್ತರ ಪ್ರದೇಶದಲ್ಲಿ 51 ಮಂದಿ ಜೀವ ಕಳೆದುಕೊಂಡಿದ್ದಾರೆ.
ಆದರೆ ವಿವಿಧ ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ಆಧರಿಸಿ ಸಾವಿನ ಸಂಖ್ಯೆ 209 ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಿಸಿಲ ಝಳಕ್ಕೆ ಇತರ 239 ಶಂಕಿತ ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 448ಕ್ಕೇರಿದೆ ಎಂದು ಹೇಳಲಾಗಿದೆ.
ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಗರಿಷ್ಠ ಸಾವು (35) ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದು, ದೆಹಲಿ (21) ನಂತರದ ಸ್ಥಾನದಲ್ಲಿದೆ. ರಾಜಸ್ಥಾನ ಮತ್ತು ಒಡಿಶಾದಲ್ಲಿ ತಲಾ 17 ಸಾವು ಸಂಭವಿಸಿದೆ. ಹಲವು ಶಂಕಿತ ಪ್ರಕರಣಗಳ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಟೈಮ್ಸ್ ಆಫ್ ಇಂಡಿಯಾ ಕಲೆ ಹಾಕಿದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 76 ಉಷ್ಣ ಸಂಬಂಧಿ ಸಾವುಗಳು ಸಂಭವಿಸಿದ್ದು, ಇದು ದೇಶದಲ್ಲೇ ಅತ್ಯಧಿಕ. ರಾಜಧಾನಿಯ ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಲಾಗಿದೆ. ಉತ್ತರ ಪ್ರದೇಶದ ಪರಿಹಾರ ಆಯುಕ್ತರ ಕಚೇರಿ 51 ಸಾವುಗಳನ್ನು ದೃಢಪಡಿಸಿದೆ. ಇದರ ಜತೆಗೆ 65 ಶಂಕಿತ ಸಾವುಗಳು ಉಷ್ಣಸಂಬಂಧಿ ಅಸ್ವಸ್ಥತೆಗಳಿಂದ ಸಂಭವಿಸಿವೆ. ಗಾಝಿಯಾಬಾದ್ ಜಿಲ್ಲೆಯಲ್ಲಿ 51 ಹಾಗೂ ನೋಯ್ಡಾದಲ್ಲಿ 14 ಮಂದಿ ಇಂಥ ಅಸ್ವಸ್ಥತೆಯಿಂದ ಜೀವ ಕಳೆದುಕೊಂಡಿದ್ದಾರೆ.
ಒಡಿಶಾದಲ್ಲಿ 41 ಸಾವುಗಳು ದೃಢಪಟ್ಟಿದ್ದು, ದೇಶದಲ್ಲಿ ಉಷ್ಣಸಂಬಂಧಿ ಸಾವಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. 118 ಮಂದಿ ಇತರ ಶಂಕಿತ ಸಾವುಗಳು ವರದಿಯಾಗಿದ್ದು, ಬಿಹಾರದಲ್ಲಿ 19 ಹಾಗೂ ರಾಜಸ್ಥಾನಲ್ಲಿ 16 ಸಾವುಗಳು ಸಂಭವಿಸಿವೆ. ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ಕ್ರಮವಾಗಿ 14 ಮತ್ತು 15 ಸಾವುಗಳನ್ನು ದಾಖಲಿಸಿವೆ. ಜಾರ್ಖಂಡ್ ನಲ್ಲಿ 12 ಹಾಗೂ ತಮಿಳುನಾಡು ಮತ್ತು ಹರ್ಯಾಣದಲ್ಲಿ ತಲಾ 5 ಸಾವುಗಳು ಸಂಭವಿಸಿವೆ.