ಉಷ್ಣ ಮಾರುತಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು: ರಾಜಸ್ಥಾನ ಹೈಕೋರ್ಟ್

Update: 2024-05-31 14:19 GMT

ರಾಜಸ್ಥಾನ ಹೈಕೋರ್ಟ್ | PC : NDTV 

ಜೈಪುರ : ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಈ ತಿಂಗಳು ಸಂಭವಿಸಿರುವ ಸಾವುಗಳನ್ನು ಗಣನೆಗೆ ತೆಗೆದುಕೊಂಡಿರುವ ರಾಜಸ್ಥಾನ ಹೈಕೋರ್ಟ್, ಉಷ್ಣ ಅಲೆಗಳನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕು ಎಂದು ಗುರುವಾರ ಹೇಳಿದೆ.

ಮಂಗಳವಾರ ರಾಜಸ್ಥಾನದ ಚುರು ಪಟ್ಟಣದಲ್ಲಿ ಉಷ್ಣತೆಯು 50.5 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಆ ಮೂಲಕ ಅದು ಭಾರತದಲ್ಲಿ ಅತ್ಯಂತ ಬಿಸಿ ಪಟ್ಟಣವಾಗಿ ದಾಖಲಾಯಿತು.

ರಾಜಸ್ಥಾನದಲ್ಲಿ ಶಾಖದಿಂದಾಗಿ ಐವರು ಮೃತಪಟ್ಟಿದ್ದಾರೆ ಎಂಬುದಾಗಿ ರಾಜ್ಯ ಸರಕಾರವು ಗುರುವಾರ ಹೈಕೋರ್ಟ್ಗೆ ತಿಳಿಸಿದೆ.

ಉಷ್ಣತೆಯು 50 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ದಾಟಿದ್ದು, ರಾಜಸ್ಥಾನ ರಾಜ್ಯದಲ್ಲಿ ಮತ್ತು ದೇಶಾದ್ಯಂತ ಕೋಟಿಗಟ್ಟಳೆ ಜನರು ಬಳಲುತ್ತಿದ್ದಾರೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ದಂಡ್ ಅವರನ್ನೊಳಗೊಂಡ ಏಕ ಸದಸ್ಯ ನ್ಯಾಯಪೀಠವು ಹೇಳಿತು.

‘‘ದುರದೃಷ್ಟವಶಾತ್, ತಿನ್ನಲು ಸಾಕಷ್ಟು ಪ್ರಮಾಣದಲ್ಲಿ ಆಹಾರ ಇಲ್ಲದ ಬಡವರು, ಎರಡು ಹೊತ್ತಿನ ಊಟಕ್ಕಾಗಿ ಸುಡುವ ಬಿಸಿಲು ಮತ್ತು ಕೊರೆಯುವ ಚಳಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆಗೆ ಒಳಗಾಗುತ್ತಾರೆ. ಈ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಅವರಲ್ಲಿ ಇಲ್ಲ. ಅವರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ’’ ಎಂದು ನ್ಯಾಯಾಲಯ ಹೇಳಿತು.

‘‘ಕೇಂದ್ರ ಸರಕಾರವು ‘ಉಷ್ಣ ಮತ್ತು ಶೀತ ಅಲೆಗಳಿಂದ ಸಂಭವಿಸುವ ಸಾವು ತಡೆ ಮಸೂದೆ’ಯನ್ನು 2015 ಡಿಸೆಂಬರ್ 18ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿದೆ. ಆದರೆ ಅದು ಇನ್ನೂ ಕಾನೂನಾಗಿಲ್ಲ’’ ಎಂದು ನ್ಯಾಯಾಧೀಶರು ಹೇಳಿದರು. ಉಷ್ಣ ಮತ್ತು ಶೀತ ಮಾರುತಗಳನ್ನು ರಾಷ್ಟ್ರೀಯ ವಿಪತ್ತುಗಳು ಎಂಬುದಾಗಿ ಘೋಷಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂಚಿತ ತಯಾರಿಗಳನ್ನು ನಡೆಸಬೇಕು ಎಂದು ಅದು ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News