ಸಿಜೆಐಗೆ ವಕೀಲರ ಪತ್ರಕ್ಕೆ ಗೇಲಿ ಮಾಡಿದ ಪ್ರಧಾನಿ | ಆಷಾಢಭೂತಿತನದ ಪರಮಾವಧಿ ಎಂದು ತಿರುಗೇಟು ನೀಡಿದ ಕಾಂಗ್ರೆಸ್
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿಗೆ ವಕೀಲರು ಬರೆದ ಪತ್ರಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಗುರುವಾರ ಪಕ್ಷವು ಆಷಾಢಭೂತಿತನದ ಪರಮಾವಧಿ ತಿರುಗೇಟು ನೀಡಿದೆ.
ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಇತರರಿಂದ ಯಾವುದೇ ನಾಚಿಕೆಯಿಲ್ಲದೆ ಕಾಂಗ್ರೆಸ್ ಬದ್ಧತೆಯನ್ನು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದರು.
ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದ ಸುಮಾರು 600 ವಕೀಲರು, “ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಹಲವಾರು ವಿಧದಲ್ಲಿ ಕಾರ್ಯಾಚರಿಸುತ್ತಿವೆ. ಭೂತಕಾಲದ ಉತ್ತಮ ಅವಧಿ ಹಾಗೂ ಸುವರ್ಣ ಯುಗದ ಕುರಿತು ಸುಳ್ಳು ಪ್ರತಿಪಾದನೆ ಮಾಡಲು ಹಾಲಿ ನಡೆಯುತ್ತಿರುವುದನ್ನು ಹೋಲಿಕೆ ಮಾಡಲಾಗುತ್ತಿದೆ. ಇದರಲ್ಲಿ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಹಾಗೂ ನಿರ್ದಿಷ್ಟ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳಿಗೆ ಮುಜುಗರವನ್ನುಂಟು ಮಾಡುವ ಉದ್ದೇಶಪೂರ್ವಕ ಭಾವನೆಗಳಲ್ಲದೆ ಮತ್ತೇನೂ ಇಲ್ಲ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಪ್ರಭಾರಿ, ಜೈರಾಮ್ ರಮೇಶ್ ಎಕ್ಸ್ ಪೋಸ್ಟ್ನಲ್ಲಿ, “ನ್ಯಾಯಾಂಗವನ್ನು ರಕ್ಷಿಸುವ ಹೆಸರಿನಲ್ಲಿ ಅತ್ಯಂತ ನಿರ್ಲಜ್ಜವಾಗಿ ಪ್ರಧಾನಿ ನ್ಯಾಯಾಂಗದ ಮೇಲಿನ ದಾಳಿಯನ್ನು ಸಂಘಟಿಸಿ ನಿರ್ದೇಶಿಸಿದ್ದಾರೆ!"
"ಇತ್ತೀಚಿನ ವಾರಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಭಾರೀ ಹೊಡೆತಗಳನ್ನು ನೀಡಿದೆ. ಚುನಾವಣಾ ಬಾಂಡ್ಸ್ ಯೋಜನೆಯು ಇದಕ್ಕೆ ಕೇವಲ ಒಂದು ಉದಾಹರಣೆಯಷ್ಟೇ. ಸುಪ್ರೀಂ ಕೋರ್ಟ್ ಅದನ್ನು ಅಸಂವಿಧಾನಿಕ ಎಂದು ಘೋಷಿಸಿತು. ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಲು ಭಯ ಹುಟ್ಟಿಸಿರುವುದು, ಬ್ಲ್ಯಾಕ್ಮೇಲ್ ಮತ್ತು ಬೆದರಿಕೆಯ ತಂತ್ರಗಳನ್ನು ಬಳಸಿರುವು ಈಗ ನಿಸ್ಸಂದೇಹವಾಗಿ ಸಾಬೀತಾಗಿದೆ, ”ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ ನೀಡುವ ಬದಲು ಪ್ರಧಾನಿ ಭ್ರಷ್ಟಾಚಾರಕ್ಕೆ ಕಾನೂನು ಭರವಸೆ ನೀಡಿದ್ದಾರೆ ಎಂದು ಜೈರಾಂ ರಮೇಶ್ ಆರೋಪಿಸಿದರು.
"ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ಮಾಡಿದ್ದೆಲ್ಲವೂ ವಿಭಜನೆ, ವಿರೂಪಗೊಳಿಸುವಿಕೆ, ದಿಕ್ಕು ತಪ್ಪಿಸುವ ಕೆಲಸ ಮತ್ತು ಮಾನಹಾನಿ ಮಾಡುವುದು. 140 ಕೋಟಿ ಭಾರತೀಯರು ಶೀಘ್ರದಲ್ಲೇ ಅವರಿಗೆ ತಕ್ಕ ಉತ್ತರವನ್ನು ನೀಡಲು ಕಾಯುತ್ತಿದ್ದಾರೆ" ಎಂದು ರಮೇಶ್ ಹೇಳಿದರು.