ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ‘ಜೇಬುಗಳ್ಳರು’ ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದಿಲ್ಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
ಈ ಹೇಳಿಕೆಗಳು ಉತ್ತಮ ಅಭಿರುಚಿಯನ್ನು ಹೊಂದಿಲ್ಲ ಎಂದು ಪರಿಗಣಿಸಿರುವ ನ್ಯಾಯಾಲಯ ರಾಹುಲ್ ಗಾಂಧಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ 8 ವಾರಗಳ ಕಾಲಾವಕಾಶ ನೀಡಿದೆ.
ರಾಹುಲ್ ಗಾಂಧಿ ಅವರ ವಿರುದ್ಧ ನವೆಂಬರ್ 23ರಂದು ಜಾರಿಗೊಳಿಸಲಾದ ನೋಟಿಸಿನ ಕುರಿತು 8 ವಾರಗಳ ಒಳಗೆ ನಿರ್ಧರಿಸುವಂತೆ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮಣಿ ಪುಷ್ಕರನ್ ಅವರನ್ನು ಒಳಗೊಂಡ ಪೀಠ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಚುನಾವಣಾ ರ‍್ಯಾಲಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ‘‘ಜೇಬು ಕಳ್ಳರು’’ ಎಂದು ಕರೆದಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿತು.
ನವೆಂಬರ್ 23ರಂದು ಶೋಕಾಸ್ ನೋಟಿಸು ಜಾರಿಗೊಳಿಸಲಾಗಿದೆ. ಆಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ‘‘ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ’’ ಎಂದು ಚುನಾವಣಾ ಆಯೋಗ ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ.
ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ದಲಿತ ಬಾಲಕಿಯ ಪೋಸ್ಟ್ ತೆಗೆದು ಹಾಕುವಂತೆ ರಾಹುಲ್ ಗಾಂಧಿಗೆ ಹೈಕೋರ್ಟ್ ಸೂಚನೆ
-2021ರಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ ದಲಿತ ಬಾಲಕಿಯ ಗುರುತು ಬಹಿರಂಗಪಡಿಸಿದ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ತೆಗೆದು ಹಾಕುವಂತೆ ರಾಹುಲ್ ಗಾಂಧಿ ಅವರಿಗೆ ದಿಲ್ಲಿ ಹೈಕೋರ್ಟ್ ಗುರುವಾರ ಸೂಚಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಿಂದ ಬ್ಲಾಕ್ ಆಗಿದ್ದ ಪೋಸ್ಟ್ ನಲ್ಲಿ ರಾಜೀವ್ ಗಾಂಧಿ ಅವರು, 2021 ಆಗಸ್ಟ್ 1ರಂದು ಸಂದೇಹಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ 9 ವರ್ಷದ ದಲಿತ ಬಾಲಕಿ ತನ್ನ ಹೆತ್ತವರೊಂದಿಗೆ ಇದ್ದ ಭಾವಚಿತ್ರವನ್ನು ಪ್ರಕಟಿಸಿದ್ದರು. ನೈಋತ್ಯ ದಿಲ್ಲಿಯ ಓಲ್ಡ್ ನಂಗಲ್ ಗ್ರಾಮದಲ್ಲಿ ಸ್ಮಶಾನದ ಅರ್ಚಕ ಅತ್ಯಾಚಾರ, ಹತ್ಯೆ ನಡೆಸಿ ಸುಟ್ಟು ಹಾಕಿದ್ದಾನೆ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದರು.
ಈ ಪೋಸ್ಟ್ ನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಖಾತೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಕೆಲವು ಕಾಲ ಅಮಾನತುಗೊಳಿಸಿತ್ತು. ತರುವಾಯ ಮರು ಆರಂಭಿಸಿತ್ತು.