ಸೆಬಿ ಮುಖ್ಯಸ್ಥೆ ವಿರುದ್ಧ ವಿಚಾರಣೆಗೆ ಹಿಂಡೆನ್‌ಬರ್ಗ್ ವರದಿಯೊಂದೇ ಸಾಲದು, ಹೆಚ್ಚುವರಿ ದಾಖಲೆಗಳನ್ನು ನೀಡಿ: ಲೋಕಾಯುಕ್ತ
ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರ ವಿರುದ್ಧ ದಾಖಲಾಗಿರುವ ಎರಡು ದೂರುಗಳ ಕುರಿತು ವಿಚಾರಣೆ ಆರಂಭಿಸಲು ಹಿಂಡೆನ್‌ಬರ್ಗ್ ರೀಸರ್ಚ್ ಆ.8ರಂದು ಪ್ರಕಟಿಸಿದ್ದ ವರದಿಯೊಂದೇ ಸಾಲುವುದಿಲ್ಲ,ಹೆಚ್ಚುವರಿ ‘ಮೂಲಭೂತ ಮತ್ತು ನ್ಯಾಯವ್ಯಾಪ್ತಿಯ’ ದಾಖಲೆಗಳನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಎ.ಎಂ.ಖನವಿಲ್ಕರ್ ನೇತೃತ್ವದ ಭ್ರಚ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ ದೂರುದಾರರಿಗೆ ತಿಳಿಸಿದೆ. ಅದು ಅ.17ರಂದು ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಬುಚ್ ಅದಾನಿ ಗ್ರೂಪ್ ಕಂಪನಿಗಳಿಗೆ ಸಂಬಂಧಿಸಿದ ಕಡಲಾಚೆಯ ಫಂಡ್‌ಗಳಲ್ಲಿ ಹೂಡಿಕೆಯನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಕೊಡಕೊಳ್ಳುವ ವ್ಯವಹಾರದ ಆರೋಪಗಳನ್ನು ಮಾಡಿರುವ ಹಿಂಡೆನ್‌ಬರ್ಗ್ ವರದಿಯೊಂದನ್ನೇ ಆಧಾರವಾಗಿಟ್ಟುಕೊಂಡು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಲೋಕಪಾಲ ಸ್ಪಷ್ಟಪಡಿಸಿದೆ. ದೂರುಗಳ ಪೈಕಿ ಒಂದನ್ನು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದಾರೆ.
ಮೊಯಿತ್ರಾ ದೂರಿನ ಕುರಿತು ಲೋಕಪಾಲ, ಅದು ಪ್ರಾಥಮಿಕವಾಗಿ ಹಿಂಡೆನ್‌ಬರ್ಗ್ ವರದಿಯನ್ನು ಆಧರಿಸಿದೆ. ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಕಲಂ 20ರ ಪ್ರಕಾರ ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ನಮಗೆ ಮನದಟ್ಟು ಮಾಡುವಲ್ಲಿ ಮತ್ತು ಪ್ರಾಥಮಿಕ ವಿಚಾರಣೆಗೆ ಆದೇಶಿಸಲು ಈ ವರದಿಯು ಏನೇನೂ ಸಾಲದು ಎಂದು ಹೇಳಿದೆ.
ಇನ್ನೊಂದು ದೂರಿಗೆ ಸಂಬಂಧಿಸಿದಂತೆ ಲೋಕಪಾಲ್, ದೂರುದಾರರು ಹಿಂಡೆನ್‌ಬರ್ಗ್ ವರದಿಯನ್ನು ಡೌನ್‌ಲೋಡ್ ಮಾಡಿಕೊಂಡ ಬೆನ್ನಲ್ಲೇ ಅವಸರದಿಂದ ದೂರನ್ನು ಸಲ್ಲಿಸಿದ್ದಾರೆ. ವರದಿಯಲ್ಲಿನ ವಿಷಯಗಳನ್ನು ಪರಿಶೀಲಿಸದೆ ಮತ್ತು ವಿಶ್ವಾಸಾರ್ಹ ದಾಖಲೆಗಳೊಂದಿಗೆ ತಾಳೆ ನೋಡದೆ ವರದಿಯಲ್ಲಿನ ನಿರೂಪಣೆಯನ್ನೇ ಯಥಾವತ್ತಾಗಿ ಪುನರುಚ್ಚರಿಸಿದ್ದಾರೆ ಎಂದು ಬೆಟ್ಟು ಮಾಡಿದೆ.
ಹಿಂಡೆನ್‌ಬರ್ಗ್ ವರದಿಯ ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ನಡೆಸಿದ ಪ್ರಯತ್ನಗಳನ್ನು ವಿವರಿಸುವಂತೆ ಹಾಗೂ ಸೆಬಿ ಮುಖ್ಯಸ್ಥೆ ವಿರುದ್ಧದ ಆರೋಪಗಳು ಹೇಗೆ ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತವೆ ಎನ್ನುವುದನ್ನು ತೋರಿಸುವಂತೆ ಲೋಕಪಾಲ ಸಂಸ್ಥೆಯು ದೂರುದಾರರಿಗೆ ಸೂಚಿಸಿದೆ.
ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ಸೆಬಿ ತನಿಖೆಯನ್ನು ಅನುಮೋದಿಸಿ ಸರ್ವೋಚ್ಚ ನ್ಯಾಯಾಲಯವು ಈ ವರ್ಷದ ಜ.3ರಂದು ಹೊರಡಿಸಿದ ತೀರ್ಪನ್ನೂ ಲೋಕಪಾಲ ಉಲ್ಲೇಖಿಸಿದೆ. ಇತ್ತೀಚಿನ ಹಿಂಡೆನ್‌ಬರ್ಗ್ ವರದಿಯನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಬಾಕಿಯಿಳಿದಿರುವ ಅರ್ಜಿಯೊಂದನ್ನೂ ಅದೂ ಉಲ್ಲೇಖಿಸಿದೆ. ಹೀಗಾಗಿ ಬಾಕಿಯುಳಿದಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ನಿರ್ಧಾರದ ಜೊತೆಗೆ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ಸೆಬಿ ಆರಂಭಿಸಿದ್ದ 24 ವಿಚಾರಣೆಗಳ ಪೈಕಿ ಬಾಕಿಯುಳಿದಿರುವ ಎರಡು ಪ್ರಕರಣಗಳಲ್ಲಿ ಫಲಿತಾಂಶಕ್ಕಾಗಿ ತಾನು ಕಾಯಬೇಕಿದೆ ಎಂದು ಹೇಳಿರುವ ಲೋಕಪಾಲ, ಹಿಂಡೆನ್‌ಬರ್ಗ್ ರೀಸರ್ಚ್‌ನ ನಡವಳಿಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದ್ದನ್ನು ಮತ್ತು ಅದರ ಶಾರ್ಟ್-ಸೆಲ್ಲಿಂಗ್ ಚಟುವಟಿಕೆಗಳ ಬಗ್ಗೆ ವಿಚಾರಣೆಗೆ ಕೇಂದ್ರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದನ್ನು ಗಮನಕ್ಕೆ ತೆಗೆದುಕೊಂಡಿದೆ.