ಮರ್ಯಾದಾ ಹತ್ಯೆ ಶಂಕೆ | ದಿಲ್ಲಿ ಯುವಕನ ಅಪಹರಣ, ಥಳಿಸಿ ಹತ್ಯೆ
ಹೊಸದಿಲ್ಲಿ : ದಿಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿ ಹಿಮಾಂಶು ಶರ್ಮಾ ಎಂಬವರನ್ನು ಈಶಾನ್ಯ ದಿಲ್ಲಿಯಲ್ಲಿರುವ ಆತನ ಮನೆಯಿಂದ ಅಪಹರಿಸಿ, ಉತ್ತರಪ್ರದೇಶದ ಭಾಗಪತ್‌ಗೆ ಕೊಂಡೊಯ್ದು ಅಲ್ಲಿ ಥಳಿಸಿ ಹತ್ಯೆಗೈದ ಘಟನೆ ಮಂಗಳವಾರ ವರದಿಯಾಗಿದೆ. ಇದೊಂದು ಮರ್ಯಾದಾ ಹತ್ಯೆಯ ಪ್ರಕರಣವೆಂದು ಶಂಕಿಸಲಾಗಿದೆ.
ಪ್ರೇಮಪ್ರಕರಣಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ ನಡೆದಿದೆಯೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯುವತಿಯೊಬ್ಬಳ ಇಬ್ಬರು ಮಾವಂದಿರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಬಂಧಿತ ಆರೋಪಿಗಳನ್ನು ಸೋಹನ್‌ಪಾಲ್ ಹಾಗೂ ಆಕಾಶ್ ಎಂಬುದಾಗಿ ಗುರುತಿಸಲಾಗಿದೆ.
ಆರೋಪಿಗಳು ಭಾಗಪತ್ನ ಪಾಬ್ಲಾ ಬೇಗಮಬಾದ್ ಗ್ರಾಮದ ನಿವಾಸಿಗಳಾಗಿದ್ದಾರೆ. ಯುವತಿ ಹಾಗೂ ಯುವಕ ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ದಿಲಿಯ ಕರ್ತಾರ್ ನಗರದ ನಿವಾಸಿಗಲಾಗಿದ್ದರು. ಅಲ್ಲಿ ಅವರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಅವರ ಪ್ರೇಮಸಂಬಂಧವನ್ನು ಸಹಿಸದ ಹುಡುಗಿಯ ಮಾವಂದಿರು ಯುವಕನನ್ನು ಕೊಲ್ಲಲು ಸಂಚುಹೂಡಿದರು.
ಭಾಗಪತ್‌ಗೆ ಯುವಕನನ್ನು ಅಪಹರಿಸಿ ಕರೆತಂದ ಅವರು ಆತನನ್ನು ಮನಬಂದಂತೆ ಥಳಿಸಿದರು. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಪೊಲೀಸ್ ಗಸ್ತು ತಂಡವೊಂದು ತಪಾಸಣೆ ಸಂದರ್ಭ ಅವರನ್ನು ಅಡ್ಡಗಟ್ಟಿತ್ತು. ಆಗ ಕಾರಿನಲ್ಲಿದ್ದ ಸೋಹನ್‌ಲಾಲ್ ಹಾಗೂ ಆಕಾಶ್‌ನನ್ನು ಪೊಲೀಸರು ಬಂಧಿಸಿದ್ದರು. ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಹಿಮಾಂಶುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಆಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಇಬ್ಬರು ಮಾವಂದಿರು, ತಂದೆ ಹಾಗೂ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.