ವಾಯುವ್ಯ ಭಾರತದ ಭಾಗಗಳಲ್ಲಿ ಇನ್ನೂ 5 ದಿನಗಳ ಕಾಲ ಬಿಸಿ ಗಾಳಿ ಮುಂದುವರಿಕೆ : ಐಎಂಡಿ

Update: 2024-05-18 15:09 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ತೀವ್ರ ಉಷ್ಣಾಂಶ ಇನ್ನೂ 5 ದಿನಗಳ ಕಾಲ ಮುಂದುವರಿಯಲಿದೆ. ಇದರಿಂದ ದಿಲ್ಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ಗರಿಷ್ಠ ಪರಿಣಾಮ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪಶ್ಚಿಮ ದಿಲ್ಲಿಯ ನಝಾಫ್‌ಗಢದಲ್ಲಿ ಗರಿಷ್ಠ ತಾಪಮಾನ 47.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ದೇಶದಲ್ಲಿ ಈ ಋತುವಿನಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ. ಇದರೊಂದಿಗೆ ಉತ್ತರ ಭಾರತ ಶುಕ್ರವಾರ ತೀವ್ರ ಉಷ್ಣಾಂಶವನ್ನು ಅನುಭವಿಸಬೇಕಾಯಿತು.

ಮುಂದಿನ 5 ದಿನಗಳ ಕಾಲ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ತೀವ್ರ ಉಷ್ಣ ಗಾಳಿ ಬೀಸಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ. ಅಲ್ಲದೆ, ಮುಂದಿನ ಮೂರು ದಿನಗಳ ಕಾಲ ಪೂರ್ವ ಹಾಗೂ ಕೇಂದ್ರ ಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಹೇಳಿದೆ.

ಹವಾಮಾನ ಇಲಾಖೆ ದಿಲ್ಲಿ, ಹರ್ಯಾಣ, ಪಂಜಾಬ್ ಹಾಗೂ ಪಶ್ಚಿಮ ರಾಜಸ್ಥಾನದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ, ದುರ್ಬಲ ಜನರ ಬಗ್ಗೆ ತೀವ್ರ ಕಾಳಜಿ ವಹಿಸುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದೆ.

ಅದು ಪೂರ್ವ ರಾಜಸ್ಥಾನ, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಶಿಶುಗಳು, ವೃದ್ಧರು ಹಾಗೂ ದೀರ್ಘಕಾಲದಿಂದ ರೋಗದಿಂದ ಬಳಲುತ್ತಿರುವವರು ಸೇರಿದಂತೆ ದುರ್ಬಲ ಜನರ ಆರೋಗ್ಯದ ಕುರಿತು ಅತ್ಯಧಿಕ ಕಾಳಜಿ ವಹಿಸುವಂತೆ ಅದು ತಿಳಿಸಿದೆ.

ಭಾರತದ 5 ಕೋಟಿ 43 ಲಕ್ಷ ಜನರಿಗೆ ಮೇ 18 ಹಾಗೂ ಮೇ 21ರ ನಡುವೆ ಕನಿಷ್ಠ ಒಂದು ದಿನ ಅತ್ಯಧಿಕ ಉಷ್ಣಾಂಶ ಅನುಭವವಾಗಲಿದೆ ಎಂದು ಅಮೆರಿಕ ಮೂಲದ ಹವಾಮಾನ ವಿಜ್ಞಾನಿಗಳ ಗುಂಪು ‘‘ಕ್ಲೈಮ್ಯಾಟ್ ಸೆಂಟರ್’’ ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News