ಖಾಲಿ ಬಿದ್ದಿರುವ ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳು
ತಿರುವನಂತಪುರ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಅನಾಥಾಶ್ರಮ ಟ್ರಸ್ಟ್ ಇಲ್ಲಿ ನಿರ್ಮಾಣ ಮಾಡಿದ ಮನೆಗಳು ಕಳೆದ ಕೆಲವು ವರ್ಷಗಳಿಂದ ಖಾಲಿ ಬಿದ್ದಿವೆ ಹಾಗೂ ಶಿಥಿಲವಾಗಿವೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿ ಕುರಿತಂತೆ ಕೇರಳ ಉಚ್ಚ ನ್ಯಾಯಾಲಯ ಶನಿವಾರ ಕಾಸರಗೋಡು ಜಿಲ್ಲಾಡಳಿತದಿಂದ ವರದಿ ಕೋರಿದೆ.
ಕೇರಳದ ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ವಿವಾದಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಹಾಗೂ ವರದಿ ಸಲ್ಲಿಸುವಂತೆ ಕಾಸರಗೋಡು ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.
‘‘ವಿವಾದಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಹಾಗೂ ಮನೆಗಳ ಸ್ಥಿತಿಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಪ್ರತಿವಾದಿ (ಜಿಲ್ಲಾಧಿಕಾರಿಗೆ)ಗೆ ನಾನು ನಿರ್ದೇಶಿಸುತ್ತೇನೆ. ಅಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅದನ್ನು ಹಸ್ತಾಂತರಿಸಲು ಬಯಸುತ್ತೀರಾ? ಇದಕ್ಕೆ ಉತ್ತರ ನಕಾರಾತ್ಮಕವಾಗಿದ್ದರೆ, ಕಾರಣ ನೀಡಬೇಕು ’’ ಎಂದು ನ್ಯಾಯಾಲಯ ತನ್ನ ಸೆಪ್ಟಂಬರ್ 15ರ ಆದೇಶದಲ್ಲಿ ತಿಳಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟಂಬರ್ 21ಕ್ಕೆ ಮುಂದೂಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ನಿರ್ಮಾಣ ಮಾಡಲಾದ 81 ಸಾವಿರ ಮನೆಗಳಲ್ಲಿ ಹಲವು ಶಿಥಿಲವಾಗಿವೆ. ಸುಮಾರು 24 ಸಾವಿರ ಮನೆಗಳನ್ನು ದುರಸ್ಥಿ ಮಾಡಬೇಕಾದ ಅಗತ್ಯತೆ ಇವೆ ಎಂದು ದೂರುದಾರರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.
ತಿರುವನಂತಪುರ ಮೂಲದ ಸರಕಾರೇತರ ಸಂಸ್ಥೆ ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ 2017ರಲ್ಲಿ ಈ ಮನೆಗಳನ್ನು ನಿರ್ಮಾಣ ಮಾಡಿತ್ತು. 2017ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರ 20 ಫಲಾನುಭವಿಗಳಿಗೆ ಈ ಮನೆಗಳನ್ನು ಹಸ್ತಾಂತರಿಸಿತ್ತು. ಕೆಲವು ವರ್ಷಗಳ ಬಳಿಕ ಮತ್ತೆ ಕೆಲವು ಫಲಾನುಭವಿಗಳಿಗೆ ಹಸ್ತಾಂತರಿಸಿತ್ತು.
ಇಲ್ಲಿ ನಿರ್ಮಾಣ ಮಾಡಲಾದ ಹೆಚ್ಚಿನ ಮನೆಗಳನ್ನು ಫಲಾನುಭವಿಗಳಿಗೆ ಇನ್ನು ಕೂಡ ಹಸ್ತಾಂತರಿಸಿಲ್ಲ. ಅಲ್ಲದೆ ಹಲವು ಮನೆಗಳು ಶಿಥಿಲವಾದ ಸ್ಥಿತಿಯಲ್ಲಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.