ಹಣಕಾಸು ಸಚಿವನಾಗಿ ಎಷ್ಟು ಸಮಯ ಇರುತ್ತೇನೋ ಗೊತ್ತಿಲ್ಲ; ರಾಜಕೀಯ ಸಂಚಲನ ಸೃಷ್ಟಿಸಿದ ಅಜಿತ್ ಪವಾರ್ ಹೇಳಿಕೆ!

Update: 2023-09-25 16:54 GMT

ಅಜಿತ್ ಪವಾರ್ | Photo: PTI 

ಮುಂಬೈ: ಮಹಾರಾಷ್ಟ್ರದ ಹಣಕಾಸು ಸಚಿವನಾಗಿ ಎಷ್ಟು ಸಮಯ ಇರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದು ಎನ್.ಸಿ.ಪಿ ನಾಯಕ ಹಾಗೂ ರಾಜ್ಯದ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕೂ ಮೊದಲು ಅವರು ಮುಂಬೈಯಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ರ ಕಾರ್ಯಕ್ರಮಗಳಲ್ಲಿ ಗೈರುಹಾಜರಾಗಿದ್ದರು ಹಾಗೂ ಅದು ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು.

ಪುಣೆಯ ಬಾರಾಮತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪವಾರ್, ‘‘ಇಂದು ಹಣಕಾಸು ಸಚಿವಾಲಯದ ಉಸ್ತುವಾರಿ ನನ್ನ ಬಳಿ ಇದೆ, ಆದರೆ ಅದು ನಾಳೆ ನನ್ನ ಬಳಿಕ ಇರುತ್ತದೆಯೋ ಇಲ್ಲವೋ ಎಂದು ನಾನು ಹೇಳಲಾರೆ’’ ಎಂದು ಹೇಳಿದರು.

ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಜಿತ್ ಪವಾರ್, ಈ ಕ್ಷೇತ್ರದ ಸಂಸ್ಥೆಗಳು ಮತ್ತು ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಸಮರ್ಥವಾಗಬೇಕು ಎಂದು ಹೇಳಿದರು.

ಇದಕ್ಕೂ ಮೊದಲು, ಮುಂಬೈಯಲ್ಲಿ ನಡೆದ ಅಮಿತ್ ಶಾ ಕಾರ್ಯಕ್ರಮಕ್ಕೆ ತಾನು ಗೈರುಹಾಜರಾಗಿರುವುದಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ಅವರು ನಿರಾಕರಿಸಿದ್ದರು. ಆ ಸಮಯದಲ್ಲಿ ತನಗೆ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿದೆ ಎಂಬುದಾಗಿ ಅಮಿತ್ ಶಾರ ಕಚೇರಿಗೆ ನಾನು ಮುಂಚಿತವಾಗಿಯೇ ತಿಳಿಸಿದ್ದೆ ಎಂದು ಅವರು ಹೇಳಿದ್ದರು.

ಅದೂ ಅಲ್ಲದೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 5 ಶೇಕಡ ಮೀಸಲಾತಿ ನೀಡುವ ಬಗ್ಗೆ ನಾನು ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ಚರ್ಚಿಸುವುದಾಗಿ ಪವಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯು ಮೈತ್ರಿಕೂಟದ ಇತರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆಯ ಅತೃಪ್ತಿಗೆ ಕಾರಣವಾಗಬಹುದಾಗಿದೆ. ಯಾಕೆಂದರೆ ಈ ಎರಡು ಪಕ್ಷಗಳು ಮುಸ್ಲಿಮರಿಗೆ ಮೀಸಲಾತಿ ನೀಡುವ ಕಲ್ಪನೆಗೆ ವಿರುದ್ಧವಾಗಿವೆ.

ಗಣೇಶ ದರ್ಶನ ಪಡೆಯಲು ಅಮಿತ್ ಶಾ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ನಿವಾಸಗಳಿಗೆ ಭೇಟಿ ನೀಡಿದ್ದರು. ಅಜಿತ್ ಪವಾರ್ ಈ ವರ್ಷದ ಆರಂಭದಲ್ಲಿ ತನ್ನ ದೊಡ್ಡಪ್ಪ ಹಾಗೂ ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು, ತನ್ನ ಬೆಂಬಲಿಗ ಶಾಸಕರೊಂದಿಗೆ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News