ಅನ್ಯಾಯವಾಗಿ ನನ್ನನ್ನು ಗುರಿಯಾಗಿಸಲಾಗಿದೆ: ಬಿಜೆಪಿ ಶೋಕಾಸ್ ನೋಟಿಸ್ ಗೆ ಜಯಂತ್ ಸಿನ್ಹಾ ಅಸಮಾಧಾನ

Update: 2024-05-23 07:21 GMT

ಜಯಂತ್ ಸಿನ್ಹಾ | PC : NDTV

ಹೊಸದಿಲ್ಲಿ: ಲೋಕಸಭಾ ಚುನಾವಣಾ ಪ್ರಚಾರ ಹಾಗೂ ಇನ್ನಿತರ ಸಂಘಟನಾತ್ಮಕ ಕೆಲಸಗಳಲ್ಲಿ ಆಸಕ್ತಿ ತೋರುತ್ತಿಲ್ಲವೆಂದು ಬಿಜೆಪಿ ನೀಡಿರುವ ನೋಟಿಸ್ ನೋಟಿಸ್‌ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಜಯಂತ್ ಸಿನ್ಹಾ, ಪಕ್ಷಕ್ಕೆ ನಿಷ್ಠನಾಗಿದ್ದರೂ ನನ್ನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್ ನ ಹಝಾರಿಬಾಗ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಜಯಂತ್ ಸಿನ್ಹಾ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಅವರ ಬದಲು ಮತ್ತೊಬ್ಬ ನಾಯಕ ಮನೀಶ್ ಜೈಸ್ವಾಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.

ಹಝಾರಿಬಾಗ್ ಲೋಕಸಭಾ ಕ್ಷೇತ್ರಕ್ಕೆ ಐದನೆ ಹಂತದ ಚುನಾವಣೆಯ ಸಂದರ್ಭದಲ್ಲಿ ಮತದಾನ ನಡೆದಿತ್ತು. ಅದೇ ದಿನ ಜಾರ್ಖಂಡ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು, ನಿಮ್ಮ ಕೃತ್ಯಗಳಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತಿದ್ದು, ಈ ಕುರಿತು ಇನ್ನೆರಡು ದಿನಗಳೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಜಯಂತ್ ಸಿನ್ಹಾ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು.

ಮೇ 14ರಂದು ಜಯಂತ್ ಸಿನ್ಹಾ ಅವರ ಪುತ್ರ ಆಶಿರ್ ಸಿನ್ಹಾ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದ ಬೆನ್ನಿಗೇ ಬಿಜೆಪಿ ಈ ನೋಟಿಸ್ ಜಾರಿಗೊಳಿಸಿತ್ತು.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಜಯಂತ್ ಸಿನ್ಹಾ, “ನನಗೆ ನೋಟಿಸ್ ಬಂದಿದ್ದು ಹಾಗೂ ಈ ನೋಟಿಸ್ ಅನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದನ್ನು ಕಂಡು ನನಗೆ ಅಚ್ಚರಿಯಾಯಿತು” ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ, ಮಾರ್ಚ್ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದ ಜಯಂತ್ ಸಿನ್ಹಾ, “ಜಾಗತಿಕ ತಾಪಮಾನ ಬದಲಾವಣೆಯಿಂದ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುವತ್ತ ಗಮನ ಹರಿಸಬೇಕಿರುವುದರಿಂದ, ನನ್ನನ್ನು ಚುನಾವಣಾ ಕರ್ತವ್ಯಗಳಿಂದ ಬಿಡುಗಡೆ ಮಾಡಬೇಕು” ಎಂದು ಮನವಿ ಮಾಡಿದ್ದರು.

ತನಗೆ ನೀಡಲಾಗಿದ್ದ ನೋಟಿಸ್ ಗೆ ಉತ್ತರಿಸಿರುವ ಜಯಂತ್ ಸಿನ್ಹಾ, “ನಿಮ್ಮ ಧೋರಣೆಯು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಹಾಗೂ ಪಕ್ಷದ ಸಾಮೂಹಿಕ ಪ್ರಯತ್ನಗಳನ್ನು ಹೂತು ಹಾಕುತ್ತದೆ. ಇದರೊಂದಿಗೆ ಪಕ್ಷದೆಡೆಗಿನ ನನ್ನ ನಿಷ್ಠೆ ಹಾಗೂ ಕಠಿಣ ಪರಿಶ್ರ್ಮದ ಹೊರತಾಗಿಯೂ ನನ್ನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿರುವಂತೆ ತೋರುತ್ತಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ತನಗೆ ನೀಡಲಾಗಿರುವ ನೋಟಿಸ್ ಅನ್ನು ಪಕ್ಷವು ಸಾರ್ವಜನಿಕಗೊಳಿಸಿರುವುದು ಸೂಕ್ತವಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News