ಪುಲ್ವಾಮ ಹುತಾತ್ಮರ ಮೃತದೇಹಗಳು ಬಂದಾಗ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು; ರಾಹುಲ್‌ ಗಾಂಧಿ

Update: 2023-10-25 10:19 GMT

Screengrab: Twitter/@shaandelhite

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗಿನ ಸಂದರ್ಶನವೊಂದರಲ್ಲಿ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ‌ ಪಾಲ್‌ ಮಲಿಕ್ ಅವರು 2019ರ ಪುಲ್ವಾಮ ದಾಳಿಯ ಕುರಿತು ಮತ್ತು ಕೆಲ ಇತರ ಮಹತ್ವದ ವಿಚಾರಗಳ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದರೆ ರಾಹುಲ್‌ ಗಾಂಧಿ ಕೂಡ ಅಚ್ಚರಿಯ ಮಾಹಿತಿ ಹೊರಗೆಡಹಿದ್ದಾರೆ. ಸರ್ಕಾರ ಪುಲ್ವಾಮ ದಾಳಿಯನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿದ ರಾಹುಲ್‌, ಘಟನೆಯ ಬಗ್ಗೆ ತಿಳಿದಾಗ ಹುತಾತ್ಮರಿಗೆ ಗೌರವ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗಿ ತಿಳಿಸಿದರು. “ಆದರೆ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಅಲ್ಲೊಂದು ಸಮಾರಂಭ ಇದ್ದಂತೆ ಕಂಡಿತು. ಪ್ರಧಾನಿ ಮೋದಿ ಅಲ್ಲಿದ್ದರು. ಕೊಠಡಿಯ ಹೊರಹೋಗಲು ನಾನು ಹರಸಾಹಸ ಪಡಬೇಕಾಯಿತು,” ಎಂದು ರಾಹುಲ್‌ ಹೇಳಿದರು.

ಸತ್ಯಪಾಲ್‌ ಮಲಿಕ್‌ ಮಾತನಾಡಿ “ಈ ದಾಳಿ ನಮ್ಮ ತಪ್ಪು ಎಂದು ನಾನು ಎರಡು ಚಾನಲ್‌ಗಳಿಗೆ ಹೇಳಿದೆ, ಇದನ್ನು ಬೇರೆಲ್ಲೂ ಹೇಳದಂತೆ ನನಗೆ ಸೂಚನೆ ನೀಡಲಾಯಿತು. ನನ್ನ ಹೇಳಿಕೆ ತನಿಖೆಯನ್ನು ಬಾಧಿಸಬಹುದು ಎಂದು ಅಂದುಕೊಂಡೆ, ಆದರೆ ಯಾವುದೇ ತನಿಖೆ ನಡೆಯಲಿಲ್ಲ. ದಾಳಿಯನ್ನು ಚುನಾವಣೆ ಉದ್ದೇಶಗಳಿಗೆ ಬಳಸಲಾಯಿತು ಹಾಗೂ ದಾಳಿ ನಡೆದ ಮೂರನೇ ದಿನ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ದಾಳಿಯನ್ನು ರಾಜಕೀಯವಾಗಿ ಬಳಸಿಕೊಂಡರು,” ಎಂದು ಮಲಿಕ್‌ ಹೇಳಿದ್ದಾರೆ.

ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸಾಗಿಸಲು ವಿಮಾನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದರೆ ಈ ದಾಳಿಯನ್ನು ತಡೆಯಬಹುದಾಗಿತ್ತು. ಸಿಬ್ಬಂದಿ ಅಪಾಯಕಾರಿ ಹಾದಿಯಲ್ಲಿ ಸಾಗಬೇಕಾಗಿ ಬಂತು ಎಂದು ಹೇಳಿದ ಮಲಿಕ್‌ ದಾಳಿಗೆ ಬಳಸಿದ ಸ್ಫೋಟಕಗಳು ಪಾಕಿಸ್ತಾನದಿಂದ ಬಂದಿದ್ದವು ಹಾಗೂ ದಾಳಿ ನಡೆಸಿದವರು ಉಗ್ರವಾದದ ಹಿನ್ನೆಲೆ ಹೊಂದಿದ್ದರು, ಇದು ಗುಪ್ತಚರ ವೈಫಲ್ಯಗಳ ಕುರಿತು ಪ್ರಶ್ನೆಗಳನ್ನೆತ್ತುತ್ತವೆ ಎಂದು ಅವರು ಹೇಳಿದರು.

“ಸಿಆರ್‌ಪಿಎಫ್‌ ವಾಹನದ ಮೇಲೆ ದಾಳಿ ನಡೆಸಿದ ಸ್ಫೋಟಕಗಳನ್ನು ತುಂಬಿದ್ದ ಟ್ರಕ್‌ ಆ ಪ್ರದೇಶದಲ್ಲಿ 10-12 ದಿನಗಳಿಂದ ಅಲೆದಾಡುತ್ತಿತ್ತು. ಈ ವಾಹನದ ಚಾಲಕ ಮತ್ತು ಮಾಲಕರಿಗೆ ಉಗ್ರವಾದದ ಹಿನ್ನೆಲೆಯಿತ್ತು. ಹಿಂದೆ ಹಲವಾರು ಬಾರಿ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು, ಆದರೂ ಗುಪ್ತಚರ ಇಲಾಖೆ ಅವರ ಮೇಲೆ ಕಣ್ಣಿಟ್ಟಿರಲಿಲ್ಲ,” ಎಂದು ಮಲಿಕ್‌ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಅದಾನಿ ಶಾಮೀಲಾತಿ ಕುರಿತು ಕೂಡ ರಾಹುಲ್‌ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮಲಿಕ್‌, ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದರಿಂದ ಕೃಷಿ ಉತ್ಪನ್ನ ಬೆಲೆಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಹೊಂದಲು ಅದಾನಿಗೆ ಸಾಧ್ಯವಾಯಿತು. ದೊಡ್ಡ ಗೋದಾಮುಗಳ ಸ್ಥಾಪನೆಯಿಂದ ಅದಾನಿ ಸಂಸ್ಥೆ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆಎಂದು.

“ಮುಂದಿನ ವರ್ಷ ಬೆಲೆ ಏರಿಕೆಯಾದಾಗ ಅವರು ಮಾರಾಟ ಮಾಡುತ್ತಾರೆ. ಎಂಎಸ್‌ಪಿ ಜಾರಿಯಾದರೆ ರೈತರು ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡುವುದಿಲ್ಲ,” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News