ಐಸಿಸಿ ಚಾಂಪಿಯನ್ಸ್ ಟ್ರೋಫಿ | ಕೇಂದ್ರ ಸರಕಾರ ಅನುಮತಿ ನೀಡಿದರೆ ಮಾತ್ರ ಪಾಕಿಸ್ತಾನಕ್ಕೆ ಭಾರತ ಕ್ರಿಕೆಟ್ ತಂಡ ಪ್ರಯಾಣಿಸಲಿದೆ : ಬಿಸಿಸಿಐ

Update: 2024-05-07 16:32 GMT

PC : X \ @BCCI 

ಹೊಸದಿಲ್ಲಿ: ಮುಂದಿನ ವರ್ಷ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕೇಂದ್ರ ಸರಕಾರ ಅನುಮತಿ ನೀಡಿದರೆ ಮಾತ್ರ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿಯಿಂದ ಮಾರ್ಚ್ ತನಕ ನಡೆಯಲಿದೆ. ಈ ಟೂರ್ನಮೆಂಟ್ಗೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಯೋತ್ಪಾದನೆಯಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನ ಸಂಬಂಧಗಳ ಕಾರಣದಿಂದಾಗಿ 2008ರ ಏಶ್ಯಕಪ್ ನಂತರ ಭಾರತವು ಪಾಕಿಸ್ತಾನ ನೆಲದಲ್ಲಿ ಯಾವುದೇ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಆಡಿಲ್ಲ.

2012ರ ಡಿಸೆಂಬರ್ನಿಂದ 2013ರ ಜನವರಿಯ ತನಕ ಭಾರತ-ಪಾಕ್ ಕ್ರಿಕೆಟ್ ತಂಡಗಳ ಮಧ್ಯೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಇದು ಉಭಯ ದೇಶಗಳ ಮಧ್ಯೆ ನಡೆದ ಕೊನೆಯ ದ್ವಿಪಕ್ಷೀಯ ಸರಣಿಯಾಗಿತ್ತು. ಆ ನಂತರ ಎರಡೂ ದೇಶಗಳು ಐಸಿಸಿ ಟೂರ್ನಮೆಂಟ್ ಗಳು ಹಾಗೂ ಏಶ್ಯ ಕಪ್ ನಲ್ಲಿ ಮಾತ್ರ ಸೆಣಸಾಡುತ್ತಿವೆ.

ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಪಟ್ಟಂತೆ ಭಾರತ ಸರಕಾರ ನಮಗೇನು ಹೇಳುತ್ತದೆಯೋ ನಾವು ಹಾಗೆಯೇ ಮಾಡುತ್ತೇವೆ. ಭಾರತ ಸರಕಾರವು ನಮಗೆ ಅನುಮತಿ ನೀಡಿದರೆ ಮಾತ್ರ ನಾವು ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಿದ್ದೇವೆ. ಹೀಗಾಗಿ ನಾವು ಭಾರತೀಯ ಸರಕಾರದ ನಿರ್ಧಾರವನ್ನು ಆಧರಿಸಿ ಮುಂದಡಿ ಇಡುತ್ತೇವೆ ಎಂದು ಸುದ್ದಿಸಂಸ್ಥೆ ಎಎನ್ಐಗೆ ಶುಕ್ಲಾ ಹೇಳಿದ್ದಾರೆ.

ಪಾಕಿಸ್ತಾನವು ಕಳೆದ ವರ್ಷ ಏಶ್ಯಕಪ್ ಆಯೋಜಿಸಿದಾಗ ಹೈಬ್ರಿಡ್ ತಂತ್ರವನ್ನು ಬಳಸುವಂತೆ ಒತ್ತಾಯಿಸಲಾಗಿತ್ತು. ಪಾಕಿಸ್ತಾನ ವಿರುದ್ಧ ಪಂದ್ಯಗಳು ಸೇರಿದಂತೆ ಭಾರತ ಆಡಿರುವ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಭಾರತ ಗೆದ್ದುಕೊಂಡಿರುವ ಫೈನಲ್ ಪಂದ್ಯವು ಕೊಲಂಬೊದಲ್ಲಿ ನಡೆದಿತ್ತು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಹಾಲಿ ಚಾಂಪಿಯನ್ ಆಗಿದ್ದು, ಈ ಟೂರ್ನಿಯು 2017ರಲ್ಲಿ ಕೊನೆಯ ಬಾರಿ ನಡೆದಿತ್ತು.

ಎರಡು ವಾರಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮೂರು ಸ್ಥಳಗಳಾದ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಗಳನ್ನು ಪಿಸಿಬಿ ಅಂತಿಮಗೊಳಿಸಿದೆ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ಇತ್ತೀಚೆಗೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News