ಭಾರತ-ಪಾಕ್ ನಡುವೆ ಮಾತುಕತೆ ನಡೆಯದಿದ್ದರೆ ಗಾಝಾ, ಫೆಲೆಸ್ತೀನ್ ಸ್ಥಿತಿಯೇ ಬರಲಿದೆ: ಫಾರೂಕ್ ಅಬ್ದುಲ್ಲಾ

Update: 2023-12-26 08:59 GMT

ಫಾರೂಕ್ ಅಬ್ದುಲ್ಲಾ (PTI)

ಹೊಸದಿಲ್ಲಿ: ವಿವಾದಗಳನ್ನು ಬಗೆಹರಿಸಲು ಪಾಕಿಸ್ತಾನದ ಜೊತೆ ಮಾತುಕತೆಗಳನ್ನು ನಡೆಸದ್ದಕ್ಕಾಗಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಶ್ರೀನಗರ ಸಂಸದ ಫಾರೂಕ್ ಅಬ್ದುಲ್ಲಾ ಅವರು, “ಮಾತುಕತೆಗಳು ಆರಂಭಗೊಳ್ಳದಿದ್ದರೆ ಗಾಝಾದಲ್ಲಿನ ಸ್ಥಿತಿಯನ್ನೇ ನಾವು ಎದುರಿಸಬೇಕಾಗಬಹುದು” ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ “ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು, ಆದರೆ ನಮ್ಮ ನೆರೆಹೊರೆಯವರನ್ನಲ್ಲ” ಎಂಬ ಹೇಳಿಕೆಯನ್ನು ಉಲ್ಲೇಖಿಸಿದರು.

ಯುದ್ಧವು ಈಗ ಆಯ್ಕೆಯಲ್ಲ ಮತ್ತು ಮಾತುಕತೆಗಳ ಮೂಲಕವೇ ವಿಷಯಗಳನ್ನು ಬಗೆಹರಿಸಬೇಕು ಎಂದು ಪ್ರಧಾನಿ ಮೋದಿಯವರೂ ಹೇಳಿದ್ದರು. ಆದರೆ ಮಾತುಕತೆ ಎಲ್ಲಿದೆ? ನವಾಝ್ ಶರೀಫ್ ಪಾಕಿಸ್ತಾನದ ಪ್ರಧಾನಿಯಾಗುವುದರಲ್ಲಿದ್ದಾರೆ ಮತ್ತು ತಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಆದರೆ ಮಾತುಕತೆಗೆ ನಾವು ಸಿದ್ಧರಿಲ್ಲದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ‘ನಾವು ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ ಇಸ್ರೇಲ್ ನಿಂದ ಬಾಂಬ್ ದಾಳಿಗೆ ತುತ್ತಾಗಿರುವ ಗಾಝಾ ಮತ್ತು ಫೆಲೆಸ್ತೀನ್ ಸ್ಥಿತಿಯನ್ನೇ ನಾವು ಎದುರಿಸಲಿದ್ದೇವೆ” ಎಂದರು.

ಕಳೆದೊಂದು ವಾರದಿಂದ ಜಮ್ಮು-ಕಾಶ್ಮೀರದಲ್ಲಿ ಸರಣಿ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಅಬ್ದುಲ್ಲಾರ ಈ ಹೇಳಿಕೆ ಹೊರಬಿದ್ದಿದೆ. ಈ ಅವಧಿಯಲ್ಲಿ ಪೂಂಛ್ನಲ್ಲಿ ಭಯೋತ್ಪಾದಕರ ಹೊಂಚುದಾಳಿಯಲ್ಲಿ ಐವರು ಯೋಧರು ಬಲಿಯಾಗಿದ್ದಾರೆ,ಬಾರಾಮುಲ್ಲಾದ ಮಸೀದಿಯಲ್ಲಿ ನಿವೃತ್ತ ಪೋಲಿಸ್ ಅಧಿಕಾರಿಯೋರ್ವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ, ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಮೂವರು ನಾಗರಿಕರು ಬಳಿಕ ನಿಗೂಢ ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News