ನೋಟಾಗೆ ಅತ್ಯಧಿಕ ಮತ ಬಿದ್ದಲ್ಲಿ ಹೊಸ ಚುನಾವಣೆ ಕೋರಿ ಅರ್ಜಿ | ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್

Update: 2024-04-26 15:09 GMT

ಚುನಾವಣಾ ಆಯೋಗ , ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ : ಅತ್ಯಧಿಕ ಮತಗಳು ನೋಟಾಗೆ ಬಿದ್ದ ಕ್ಷೇತ್ರಗಳಲ್ಲಿ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿ ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ ನೋಟಾಗೆ ಅತ್ಯಧಿಕ ಮತಗಳು ದೊರೆತಲ್ಲಿ ಆ ಕ್ಷೇತ್ರದಲ್ಲಿ ಆ ಚುನಾವಣೆಯನ್ನು ಅಸಿಂಧು ಎಂದು ಪರಿಗಣಿಸಬೇಕು ಹಾಗೂ ಆ ಹೊಸತಾಗಿ ಚುನಾವಣೆಗಳನ್ನು ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಒಂದು ವೇಳೆ ಕಣದಲ್ಲಿರುವ ಅಭ್ಯರ್ಥಿಗಳು ನೋಟಾಗಿಂತ ಕಡಿಮೆ ಮತ ಪಡೆದಲ್ಲಿ ಅವರಿಗೆ ಏದು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದರಿಂದ ನಿಷೇಧ ವಿಧಿಸಬೇಕು ಹಾಗೂ ನೋಟಾ ಒಂದು ಕಾಲ್ಪನಿಕ ಅಭ್ಯರ್ಥಿಯೆಂಬ ಬಗ್ಗೆ ಜನತೆಯ ನಡುವೆ ಸಮರ್ಪಕ ಹಾಗೂ ದಕ್ಷ ರೀತಿಯಲ್ಲಿ ಪ್ರಚಾರವನ್ನು ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

2021ರಲ್ಲಿಯೂ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆಗ ಸುಪ್ರೀಂಕೋರ್ಟ್, ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದಿಂದ ಈ ಬಗ್ಗೆ ಪ್ರತಿಕ್ರಿಯೆಗಳನ್ನು ಕೇಳಿತ್ತು. 2021ರಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಯಲ್ಲಿ ನೋಟಾ ಅತ್ಯಧಿಕ ಮತಗಳನ್ನು ಗಳಿಸಿದಲ್ಲಿ, ಆ ಚುನಾವಣಾ ಫಲಿತಾಂಶವನ್ನು ಅಮಾನ್ಯಗೊಳಿಸಬೇಕೆಂದು ಕೋರಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಡ ನ್ಯಾಯಪೀಠವು ನಡೆಸಿತ್ತು ಹಾಗೂ ಕಾನೂನು ಸಚಿವಾಲಯ ಹಾಗೂ ಸಾಮಾಜಿಕ ನ್ಯಾಯಾಲಯ ಇಲಾಖೆಗೆ ಈ ಬಗ್ಗೆ ನೋಟಿಸ್ ಜಾರಿಗೊಳಿಸಿತ್ತು.

ಇವಿಎಂ ಯಂತ್ರದಲ್ಲಿ ನಮೂದಿಸಲಾದ ಯಾವುದೇ ಅಭ್ಯರ್ಥಿಗೂ ಮತ ನೀಡುವುದಿಲ್ಲ (ನನ್ ಆಫ್ ದಿ ಎಬೋವ್) ಎಂಬ ಆಯ್ಕೆಯನ್ನು ಭಾರತೀಯ ಚುನಾವಣಾ ಆಯೋಗವು 2013ರಲ್ಲಿ ಜಾರಿಗೊಳಿಸಿತ್ತು. 2013ರಲ್ಲಿ ಮಾನವ ಹಕ್ಕುಗಳ ಸಂಘಟನೆ ಪಿಯುಸಿಎಲ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ನೋಟಾ ಆಯ್ಕೆಯನ್ನು ಭಾರತೀಯ ಚುನಾವಣಾ ಆಯೋಗ ಜಾರಿಗೊಳಿಸಿತ್ತು.

‘‘ಪ್ರಜಾಪ್ರಭುತ್ವವು ಉಳಿಯಬೇಕಾದರೆ, ಲಭ್ಯವಿರುವವರಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಜನತೆಯ ಪ್ರತಿನಿಧಿಯಾಗಿ ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ. ಧನಾತ್ಮಕವಾದ ಮತಗಳ ಮೂಲಕ ಚುನಾವಣೆಯನ್ನು ಗೆಲ್ಲುವ ಅತ್ಯುನ್ನತ ನೈತಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳ ಮೂಲಕವಷ್ಟೇ ಇದನ್ನು ಸಾಧಿಸಬಹುದಾಗಿದೆ. ಚೈತನ್ಯಶಾಲಿಯಾದ ಪ್ರಜಾಪ್ರಭುತ್ವದಲ್ಲಿ ಮತದಾರನಿಗೆ ನೋಟಾವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಬೇಕಾಗಿದೆ. ಇದರಿಂದಾಗಿ ರಾಜಕೀಯ ಪಕ್ಷಗಳು ದಕ್ಷ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ”, ಎಂದು ಸುಪ್ರೀಂಕೋರ್ಟ್ 2013ರಲ್ಲಿ ನೀಡಿದ ಆದೇಶದಲ್ಲಿ ಅಭಿಪ್ರಾಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News