‘ಭಾರತೀಯ ಶಿಕ್ಷಣದಲ್ಲಿ ಬಿಕ್ಕಟ್ಟು’ ಕುರಿತು ಉಪನ್ಯಾಸ ರದ್ದುಗೊಳಿಸಿದ ಐಐಟಿ-ಬಾಂಬೆ

Update: 2024-02-01 09:18 GMT

ಐಐಟಿ-ಬಾಂಬೆ (Photo: www.iitb.ac.in)

ಹೊಸದಿಲ್ಲಿ: ಗುರುವಾರ (ಜ.31) ನಿಗದಿಯಾಗಿದ್ದ ಸಾಂಸ್ಕೃತಿಕ ಕಾರ್ಯಕರ್ತ,ಸಾಹಿತ್ಯ ವಿಮರ್ಶಕ ಹಾಗೂ ಬರೋಡಾದ ಮಹಾರಾಜ ಸಯಾಜಿರಾವ ವಿವಿಯ ಮಾಜಿ ಪ್ರಾಧ್ಯಾಪಕ ಗಣೇಶ ದೇವಿಯವರ ಉಪನ್ಯಾಸವನ್ನು ಐಐಟಿ-ಬಾಂಬೆ ರದ್ದುಗೊಳಿಸಿದೆ. ಇದು ನಿಗದಿತ ಉಪನ್ಯಾಸಗಳನ್ನು ರದ್ದುಗೊಳಿಸುವ ಸಂಸ್ಥೆಯ ಚಾಳಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಳವಳಗಳನ್ನು ಸೃಷ್ಟಿಸಿದೆ ಎಂದು thewire.in ವರದಿ ಮಾಡಿದೆ.

ಇನ್‌ಸ್ಟಿಟ್ಯೂಟ್ ಲೆಕ್ಚರ್ ‘ಸರಣಿಯಲ್ಲಿ ‘ಭಾರತದಲ್ಲಿ ಜ್ಞಾನ ಮತ್ತು ಶಿಕ್ಷಣದಲ್ಲಿ ಬಿಕ್ಕಟ್ಟು’ ಕುರಿತು ಉಪನ್ಯಾಸವನ್ನು ನೀಡುವಂತೆ ಐಐಟಿ-ಬಾಂಬೆ ಅಧಿಕಾರಿಗಳು ದೇವಿಯವರನ್ನು ಆಹ್ವಾನಿಸಿದ್ದರು. ನಿಗದಿತ ಉಪನ್ಯಾಸದ ಕುರಿತು ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ಒಂದು ತಿಂಗಳು ಮೊದಲೇ ಮಾಹಿತಿಯನ್ನು ನೀಡಲಾಗಿತ್ತು.

ಆದರೆ, ಅನಿರೀಕ್ಷಿತ ಸಂದರ್ಭಗಳಿಂದಾಗಿ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಜ.30ರಂದು ತಿಳಿಸಿದ್ದರು. ಮಾಧ್ಯಮ ವರದಿಯಂತೆ ಐಐಟಿ-ಬಾಂಬೆ ಕ್ಯಾಂಪಸ್‌ನಲ್ಲಿ ಉಪನ್ಯಾಸಗಳ್ನು ನಿಯಂತ್ರಿಸುವ ಹೊಣೆಯನ್ನು ಹೊತ್ತಿರುವ ಸಮಿತಿಯು ಉಪನ್ಯಾಸವನ್ನು ರದ್ದುಗೊಳಿಸಲು ನಿರ್ಧರಿಸಿತ್ತು.

‘ಪ್ರೊ.ದೇವಿ ಅವರು ಇತಿಹಾಸ ಮತ್ತು ಪ್ರಸ್ತುತ ಸಮಾಜದ ಬಗ್ಗೆ ತನ್ನ ಚಿಂತನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಬುದ್ಧಿಜೀವಿಯಾಗಿರುವುದರಿಂದ ಅವರ ಉಪನ್ಯಾಸವನ್ನು ಕೇಳಲು ನಾವು ಉತ್ಸುಕರಾಗಿದ್ದೆವು. ಆದರೆ ಹಿಂದಿನ ನಿದರ್ಶನಗಳ ಹಿನ್ನೆಲೆಯಲ್ಲಿ ಸಂಸ್ಥೆಯು ಉಪನ್ಯಾಸವನ್ನು ರದ್ದುಗೊಳಿಸಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿತ್ತು ’ ಎಂದು ಕ್ಯಾಂಪಸ್‌ನ ವಿದ್ಯಾರ್ಥಿಯೋರ್ವರು ಹೇಳಿದರು.

‘ನಾನು ಹಿಂದೆಂದೂ ಐಐಟಿ-ಬಾಂಬೆ ಜೊತೆ ಸಂಬಂಧವನ್ನು ಹೊಂದಿರಲಿಲ್ಲ. ಉಪನ್ಯಾಸವನ್ನು ನೀಡುವಂತೆ ಸಂಸ್ಥೆಯ ಲೆಕ್ಚರ್ ಸಮಿತಿಯು ನನ್ನನ್ನು ಆಹ್ವಾನಿಸಿತ್ತು. ಆದರೆ ನಾನು ಹೊರಡುವ ಒಂದು ದಿನ ಮೊದಲು ಉಪನ್ಯಾಸವನ್ನು ರದ್ದುಗೊಳಿಸಿರುವ ಬಗ್ಗೆ ನನಗೆ ಕರೆಬಂದಿತ್ತು. ನಾನು ಕಾರಣವನ್ನೂ ಕೇಳಲಿಲ್ಲ, ಏಕೆಂದರೆ ಅದು ನನ್ನ ಮೂಲಭೂತ ಹಕ್ಕಲ್ಲ. ನನ್ನ ಕೆಲಸಗಳೇ ಸಾಕಷ್ಟು ಬಾಕಿಯುಳಿದಿವೆ, ಅದಕ್ಕಾಗಿ ನಾನು ಈ ಸಮಯವನ್ನು ಬಳಸಿಕೊಂಡೆ. ಆದಾಗ್ಯೂ ಕೊನೆಘಳಿಗೆಯನ್ನು ಕಾರ್ಯಕ್ರಮಗಳನ್ನು ರದ್ದುಗೊಳಿಸುವುದು ಅಹಿತಕರವಾಗಿರುತ್ತದೆ’ ಎಂದು ಪ್ರೊ.ದೇವಿ ಹೇಳಿದರು.

‘ಕಾರ್ಯಕ್ರಮವನ್ನು ರದ್ದುಗೊಳಿಸಿರುವುದರ ಹಿಂದಿನ ಪ್ರೇರಣೆ ಏನಾಗಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟ. ನಾನು ಇನ್ನೊಂದು ಕೇಂದ್ರೀಯ ಸಂಸ್ಥೆ ಐಐಟಿ-ಗುವಾಹಟಿಯಲ್ಲಿ ಉಪನ್ಯಾಸ ನೀಡಿದ್ದೆ. ಎರಡೂ ಸಂಸ್ಥೆಗಳಿಗೆ ಒಂದೇ ನಿಯಮಗಳು ಅನ್ವಯಿಸುತ್ತವೆ. ಹೀಗಿರುವಾಗ ನಾನು ಐಐಟಿ-ಬಾಂಬೆಯಲ್ಲಿ ಏಕೆ ಉಪನ್ಯಾಸ ನೀಡಬಾರದು?’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರೊ.ದೇವಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News