ಐಐಟಿ : ಕ್ಯಾಂಪಸ್ ಸಂದರ್ಶನದ ಫಾರ್ಮ್‌ಗಳಲ್ಲಿ ಜಾತಿ ಪ್ರಶ್ನೆ!
ಹೊಸದಿಲ್ಲಿ: ಐಐಟಿಗಳಲ್ಲಿ ಕ್ಯಾಂಪಸ್ ನೇಮಕಾತಿಗಳನ್ನು ನಡೆಸುತ್ತಿರುವ ಕೆಲವು ಕಂಪನಿಗಳು ಫಾರ್ಮ್‌ಗಳಲ್ಲಿ ತಮ್ಮ ಜಾತಿ ಹಿನ್ನೆಲೆ ಅಥವಾ ಮೂರು ವರ್ಷಗಳ ಹಿಂದೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯಲ್ಲಿ ಗಳಿಸಿದ್ದ ರ‍್ಯಾಂಕ್‌ಗಳನ್ನು ನಮೂದಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದು, ಇದು ತಾರತಮ್ಯವನ್ನು ಉತ್ತೇಜಿಸಲಾಗುತ್ತಿದೆ ಎಂಬ ಆರೋಪಕ್ಕೆ ಕಾರಣವಾಗಿದೆ.
ತಮ್ಮ ಜಾತಿಗಳನ್ನು ಪ್ರಶ್ನಿಸದಂತೆ ಕಂಪನಿಗಳಿಗೆ ಸೂಚಿಸುವಲ್ಲಿ ವಿಫಲಗೊಂಡಿರುವ ಐಐಟಿ ಆಡಳಿತಗಳು ಇದರಲ್ಲಿ ಶಾಮೀಲಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಮಾಹಿತಿಯು ಎಸ್ಸಿ/ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಸಂಭಾವ್ಯ ವೃತ್ತಿಜೀವನ ಅಪಾಯಕ್ಕೆ ಕಾರಣವಾಗಬಹುದು ಎಂದು ಕೆಲವು ವಿದ್ಯಾರ್ಥಿಗಳು ಭಾವಿಸಿದ್ದಾರೆ.
ಕ್ಯಾಂಪಸ್ ನೇಮಕಾತಿ ಸಂದರ್ಶನಗಳಲ್ಲಿ ತಮಗೆ ವಿತರಿಸಲಾದ ಫಾರ್ಮ್‌ಗಳಲ್ಲಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತಾವು ಗಳಿಸಿದ್ದ ರ‍್ಯಾಂಕ್‌ಗಳು ಮತ್ತು ತಮ್ಮ ಸಮುದಾಯ ವಿವರಗಳನ್ನು ಕೇಳಿರುವ ಹಿನ್ನೆಲೆಯಲ್ಲಿ ಕಾನ್ಪುರ ಮತ್ತು ಗುವಾಹಟಿ ಐಐಟಿಗಳ ಕೆಲವು ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಜಾತಿ ಮತ್ತು ಜೆಇಇ ರ‍್ಯಾಂಕ್‌ಗಳನ್ನು ಕೋರಿದ ಕಂಪನಿಗಳಲ್ಲಿ ಎಲ್ಆ್ಯಂಡ್ಟಿ,ಜಾಗ್ವಾರ್ ಆ್ಯಂಡ್ ಲ್ಯಾಂಡ್ರೋವರ್(ಜೆಎಲ್ಆರ್), ನಿವಾ ಬುಪಾ ಮತ್ತು ಮೆರಿಲಿಟಿಕ್ಸ್ ಸೇರಿವೆ.
ಐಐಟಿಗಳಲ್ಲಿ ಸದ್ಯ ನಡೆಯುತ್ತಿರುವ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನೇಮಕಾತಿಗಾಗಿ ಬಂದಿರುವ ಎಲ್ಲ ಕಂಪನಿಗಳು ಜಾತಿ ಅಥವಾ ಜೆಇಇ ರ‍್ಯಾಂಕ್‌ಗಳ ಕುರಿತು ಪ್ರಶ್ನೆಗಳನ್ನು ಕೇಳಿಲ್ಲ.
ತಮ್ಮ ಜೆಇಇ ರ‍್ಯಾಂಕ್‌ಗಳು ತಾವು ಮೀಸಲು ವರ್ಗಗಳಡಿ ಐಐಟಿಗಳಿಗೆ ಪ್ರವೇಶ ಪಡೆದಿದ್ದೇವೆಯೇ ಎನ್ನುವುದನ್ನು ತಮ್ಮ ಸಂಭಾವ್ಯ ಉದ್ಯೋಗದಾತರಿಗೆ ಬಹಿರಂಗಗೊಳಿಸುತ್ತವೆ ಎಂದು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಕಳವಳಗೊಂಡಿದ್ದಾರೆ. ಪ್ರವೇಶಕ್ಕಾಗಿ ಈ ವಿದ್ಯಾರ್ಥಿಗಳಿಗೆ ಕಟ್-ಆಫ್ ಅಂಕಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗಿಂತ ಕಡಿಮೆಯಾಗಿರುತ್ತವೆ.
ಇಂತಹ ಮಾಹಿತಿಯು ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತು ಪ್ರಾಯಶಃ ನಂತರ ಉದ್ಯೋಗ ಸ್ಥಳಗಳಲ್ಲಿ ತಮ್ಮ ವಿರುದ್ಧ ತಾರತಮ್ಯಕ್ಕೆ ಬಳಕೆಯಾಗಬಹುದು ಎಂಬ ಆತಂಕ ಈ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ವಿದ್ಯಾರ್ಥಿಗಳು ವಿವಿಧ ವಾಟ್ಸ್ಆ್ಯಪ್ ಗುಂಪುಗಳಲ್ಲಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಐಐಟಿ ಕಾನ್ಪುರದ ಮಾಜಿ ವಿದ್ಯಾರ್ಥಿ ಹಾಗೂ ಹಾಲಿ ಸಾಮಾಜಿಕ ಹೋರಾಟಗಾರ ಧೀರಜ ಸಿಂಗ್ ಅವರು, ಜಾತಿ ತಾರತಮ್ಯವನ್ನು ನಡೆಸುವ ಕಂಪನಿಗಳ ಪ್ರಯತ್ನದಲ್ಲಿ ಐಐಟಿಗಳು ಕೈಜೋಡಿಸಿವೆ ಎಂದು ಆರೋಪಿಸಿ ಎಸ್ಸಿ ಮತ್ತು ಎಸ್ಟಿ ಆಯೋಗಗಳಿಗೆ ಹಾಗೂ ಶಿಕ್ಷಣ ಸಚಿವಾಲಯಕ್ಕೆ ದೂರುಗಳನ್ನು ಸಲ್ಲಿಸಿದ್ದಾರೆ.
ಕೆಲವು ಕಂಪನಿಗಳು ಪ್ರತಿ ವರ್ಷ ಇಂತಹ ಮಾಹಿತಿಗಳನ್ನು ಕೋರುತ್ತವೆ. ಆದರೆ ವಿದ್ಯಾರ್ಥಿಗಳು ಈ ಹಿಂದೆ ಪ್ರತಿಭಟಿಸಿದ್ದು ಅಪರೂಪ ಎಂದು ಸಿಂಗ್ ಹೇಳಿದರು.
ನೇಮಕಾತಿ ಕಂಪನಿಗಳು ಮೀಸಲಾತಿ ಸೌಲಭ್ಯಗಳನ್ನು ಒದಗಿಸದ ಹೊರತು ಅವು ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಅಥವಾ ಜೆಇಇ ರ‍್ಯಾಂಕ್ ಬಹಿರಂಗಗೊಳಿಸುವಂತೆ ಅವರನ್ನು ಬಲವಂತಗೊಳಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಐಐಟಿಗಳಿಗೆ ನಿರ್ದೇಶನ ನೀಡುವಂತೆ ಸಿಂಗ್ ತನ್ನ ದೂರಿನಲ್ಲಿ ಎಸ್ಸಿ ಆಯೋಗವನ್ನು ಕೋರಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಸಲ್ಲಿಸುವ ಮಾಹಿತಿಗಳ ದುರುಪಯೋಗವಾಗಬಹುದು ಎಂಬ ಆರೋಪಗಳನ್ನು ತಳ್ಳಿಹಾಕಿರುವ ಎಲ್ ಆ್ಯಂಡ್ ಟಿ ಯ ಮುಖ್ಯಸಂವಹನ ಅಧಿಕಾರಿ ಸುಮೀತ್ ಚಟರ್ಜಿ ಅವರು,‘ನಮ್ಮ ಕಂಪನಿಯು ಎಲ್ಲರನ್ನು ಒಳಗೊಂಡ ವೈವಿಧ್ಯಮಯ ಕೆಲಸದ ತಾಣವನ್ನು ಉತ್ತೇಜಿಸಲು ಬದ್ಧವಾಗಿದೆ. ಕಂಪನಿಯು ಸಮಾನ ಅವಕಾಶಗಳ ಹಾಗೂ ಜಾತಿ, ಜನಾಂಗ, ಬಣ್ಣ ಅಥವಾ ಲೈಂಗಿಕ ದೃಷ್ಟಿಕೋನದಂತೆ ಅಂಶಗಳನ್ನು ಆಧರಿಸಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದ ತತ್ತ್ವಗಳನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಜೆಎಲ್ಆರ್ ಕೂಡ ಹೇಳಿಕೆಯೊಂದರಲ್ಲಿ ಇಂತಹುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.